ಅಂಧ ವ್ಯಕ್ತಿಗಾಗಿ ಓಡಿ ಬಸ್ ನಿಲ್ಲಿಸಿದ ಮಹಿಳೆಗೆ ನೆಟ್ಟಿಗರ ಬಹುಪರಾಕ್!

ಕೊಚ್ಚಿ: ಅಂಧ ವ್ಯಕ್ತಿಗೆ ಬಸ್ ಮಿಸ್ ಆಗಿದ್ದು ಆತನಿಗೆ ಸಹಾಯ ಮಾಡುವ ಉದ್ದೇಶದಿಂದ ಬಸ್ ಹಿಂದೆ ಓಡಿ ಬಸ್ಸನ್ನು ನಿಲ್ಲಿಸಿ ಮಾನವೀಯತೆ ಮೆರೆದಿರುವ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಬಹುಪರಾಕ್ ಪಡೆದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯ ಸಾಹಸ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಹೊಗಳಿಕೆಗೆ ಪಾತ್ರವಾಗಿದೆ. ಚಲಿಸುತ್ತಿರುವ ಬಸ್ಸಿನ ಹಿಂದೆ ಓಡಿದ ಮಹಿಳೆ ತಿರುವಲ್ಲ ಪಟ್ಟಣದ ಅಂಗಡಿಯೊಂದರ ಸೇಲ್ಸ್ ವುಮನ್ ಸುಪ್ರಿಯಾ ಆಗಿದ್ದಾರೆ.
ಅಂಧ ವ್ಯಕ್ತಿಯನ್ನು ಬಿಟ್ಟು ಬಸ್ ಚಲಿಸುತ್ತಿದ್ದಂತೆಯೇ ಮಹಿಳೆ ಓಡಿ ಬಸ್ಸನ್ನು ನಿಲ್ಲಿಸಿ ಕಂಡಕ್ಟರ್ ಬಳಿ ಮನವಿ ಮಾಡುತ್ತಾರೆ. ಬಸ್ಸಿನ ಹಿಂದೆ ಒಬ್ಬ ವ್ಯಕ್ತಿ ಕೈಯ್ಯಲ್ಲಿ ಕೋಲು ಹಿಡಿದುಕೊಂಡು ನಿಧಾನವಾಗಿ ಬರುತ್ತಿರುವುದು ಕಾಣಿಸುತ್ತದೆ. ಮಹಿಳೆ ಆತನನ್ನು ಬಸ್ ತನಕ ಕರೆದುಕೊಂಡುವ ಹೋಗಿ ಬಸ್ ಹತ್ತಿಸುತ್ತಾರೆ. ಈ ವೀಡಿಯೋವನ್ನು ಮೊದಲು ಐಪಿಎಸ್ ಅಧಿಕಾರಿಯೊಬ್ಬರು ಟ್ವಿಟರ್ ನಲ್ಲಿ ಶೇರ್ ಮಾಡಿ `ಜಗತ್ತು ಬದುಕಲು ಒಂದು ಉತ್ತಮ ಸ್ಥಳವನ್ನಾಗಿಸಿದ್ದಾರೆ ಈಕೆ. ಕೈಂಡ್ ನೆಸ್ ಈಸ್ ಬ್ಯೂಟಿಫುಲ್’ ಎಂದು ಬರೆದಿದ್ದಾರೆ.