ʻಈದ್-ಉಲ್-ಅದಾಗೆ ನಿಮ್ಮ ಮಕ್ಕಳನ್ನೇ ಬಲಿ ಕೊಡುವಿರಾ?ʼ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಲಕ್ನೋ: ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ ಹೊಸ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈದ್-ಉಲ್-ಅದಾಗೆ ಪ್ರಾಣಿಗಳನ್ನು ಬಲಿಕೊಡುವ ಬದಲು ನಿಮ್ಮ ಮಕ್ಕಳನ್ನು ಬಲಿ ಕೊಡುವಿರಾ ಎಂದು ಹೇಳಿಕೆ ಗುರ್ಜರ್ ಪ್ರಶ್ನೆ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಾಂಸದಿಂದ ಕೊರೊನಾ ಸೋಂಕು ಹರಡುತ್ತಿದೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ಮಾಂಸ, ಹೆಡವನ್ನು ನೋಡಲು ನಾನು ಇಷ್ಟಪಡುವುದಿಲ್ಲ, ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ಹತ್ಯೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಯಾರು ಈದ್ ದಿನ ಪ್ರಾಣಿಗಳನ್ನು ಬಲಿ ಕೊಡಲು ಮುಂದಾಗುತ್ತೀರೋ ಅಂಥವರು ನಿಮ್ಮ ಮಕ್ಕಳನ್ನು ಬಲಿ ಕೊಡಿ, ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ, ಸರ್ಕಾರದ ಮಾರ್ಗ ಸೂಚಿ ಪ್ರಕಾರ ಮಸೀದಿ ಹಾಗೂ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವಂತಿಲ್ಲ, ಅದೇ ರೀತಿ ಈದ್ ದಿನ ಪ್ರಾಣಿಗಳನ್ನು ಕೂಡ ಬಲಿ ಕೊಡುವಂತಿಲ್ಲ. ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ. ಸನಾತನ ಧರ್ಮದಲ್ಲಿ ಕೂಡ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ ಈಗ ಅದರ ಬದಲು ತೆಂಗಿನಕಾಯಿ ಬಳಸಲಾಗುತ್ತಿದೆ. ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತೇನೆ ಪ್ರಾಣಿಗಳ ‘ಕುರ್ಬಾನಿ’ ನೀಡುವುದು ಬೇಡ. ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ನಿಲ್ಲಿಸಿ. ಯಾವುದೇ ಕಾರಣಕ್ಕೂ ಲೋನಿಯಲ್ಲಿ ಇಂತಹ ಕ್ರಮಗಳಿಗೆ ಅನುಮತಿ ನೀಡುವುದಿಲ್ಲ ಎಂದು ನಂದ ಕಿಶೋರ್ ಹೇಳಿದರು.