2 ತಿಂಗಳ ಬಳಿಕ ಬೆಳಕಿಗೆ ಬಂದ ಗೃಹಿಣಿ ಹತ್ಯೆ!
ಚಾಮರಾಜನಗರ: ಮಹಿಳೆಯನ್ನು ಆಕೆಯ ಪತಿ ಮತ್ತಾತನ ಮನೆಯವರೇ ಬಾವಿಗೆ ತಳ್ಳಿ ಕೊಲೆಗೈದಿರುವ ಸಂಗತಿ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಅಜ್ರಾ ಭಾನು(34) ಎಂದು ಗುರುತಿಸಲಾಗಿದೆ. ಅಜ್ರಾ ಭಾನು ಅವರನ್ನು ನಾಗವಳ್ಳಿ ಗ್ರಾಮದ ಅಬ್ದುಲ್ ನಜೀಬ್(37) ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ಕೆಲವರ್ಷಗಳಿಂದ ಮುಖ್ಯ ಆರೋಪಿ ಅಬ್ದುಲ್ ನಜೀಬ್ ನ ನಾಲ್ವರು ಸಹೋದರರು ಮತ್ತು ಸಹೋದರಿಯ ಕುಟುಂಬದವರು ಅಜ್ರಾ ಭಾನು ಮಾಟ ಮಾಡಿಸುತ್ತಾಳೆ. ಅದರಿಂದ ನಮ್ಮ ಕುಟುಂಬಗಳಲ್ಲಿ ಯಾರಿಗಾದರೂ ಕಾಯಿಲೆ ಬರುತ್ತಿರುತ್ತದೆ ಮತ್ತು ನಾವು ಆರ್ಥಿಕವಾಗಿ ಉದ್ಧಾರ ಆಗಲು ಆಗುತ್ತಿಲ್ಲ ಎಂದು ಆರೋಪಿಸುತ್ತಿದ್ದರು ಎನ್ನಲಾಗಿದೆ.
ಗಂಡ ನಜೀಬ್, ನಾಲ್ವರು ಸಹೋದರರು ಮತ್ತು ಓರ್ವ ಸಹೋದರಿ ಪೂರ್ವ ಯೋಜನೆ ಮಾಡಿಕೊಂಡು ನಾಗವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸೇರಿಕೊಂಡು ಏಪ್ರಿಲ್ 20ರಂದು ಅಜ್ರಾ ಭಾನುವಿನ ಉಸಿರು ಕಟ್ಟಿಸಿ ಮಕ್ಕಳ ಎದುರಿಗೇ ಕೊಲೆ ಮಾಡಿದರು. ನಂತರ ದೇಹವನ್ನು ಅಲ್ಲಿಯೇ ಇದ್ದ ಕೆರೆಗೆ ಹಾಕಿ ಕಾಲು ಜಾರಿ ಬಿದ್ದಳೆಂದು ಕಥೆ ಕಟ್ಟಿದ್ದರು. ನಂತರ ಕಳೆದ ಮೇ 25 ರಂದು ಅಜ್ರಾ ಭಾನುವಿನ ಮಕ್ಕಳು ಅಜ್ಜನ ಮನೆ ಚಾಮರಾಜನಗರಕ್ಕೆ ತೆರಳಿದ್ದರು. ಆಗ ಪುಟ್ಟ ಮಕ್ಕಳನ್ನು ಅಜ್ಜನ ಮನೆಯವರು ಪ್ರಶ್ನಿಸಿದಾಗ ಮಕ್ಕಳು ನಾಲ್ವರೂ ಸೇರಿ ಆಕೆಯ ಮೇಲೆ ಕೂತು ಉಸಿರುಕಟ್ಟಿಸಿ ಕೊಂದಿದ್ದನ್ನು ಬಾಯಿ ಬಿಟ್ಟಿವೆ. ಕೂಡಲೇ ಚಾಮರಾಜನರ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೃತಳ ಗಂಡ ನಜೀಬ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಉಳಿದ ಎಂಟು ಮಂದಿ ಆರೋಪಿಗಳು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.