ಹೇಮಾವತಿ ನಾಲೆ ದುರಸ್ತಿಗೆ 70 ಲಕ್ಷ ರೂ. ಮಂಜೂರು- ಶಾಸಕ ಮಸಾಲಾ ಜಯರಾಮ್

ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ಹೇಮಾವತಿ ವಂಚಿತ ಕೆರೆಗಳ ವೀಕ್ಷಣೆ ನಡೆಸಿ ನಾಲೆ ದುರಸ್ಥಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲು ಕ್ಷೇತ್ರ ಪ್ರವಾಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂಡಿಸ್ಕೆರೆ ಕೆರೆ ವೀಕ್ಷಿಸಿ ಅಲ್ಲಿಗೆ ನೀರು ಹರಿಯುವ ನಾಲೆಯ ದುರಸ್ಥಿಗೆ 70 ಲಕ್ಷ ರೂಗಳನ್ನು ರಾಜ್ಯ ಸರ್ಕಾರ ಮೂಲಕ ಮಂಜೂರು ಮಾಡಿಸಿರುವುದಾಗಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು. ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಕೆರೆ ಗ್ರಾಮದ ಕೆರೆ ಮತ್ತು ನಾಲೆ ವೀಕ್ಷಿಸಿ ನಂತರ ರೈತರೊಂದಿಗೆ ಮಾತನಾಡಿದ ಅವರು ಸಿ.ಎಸ್.ಪುರ ಹೋಬಳಿಗೆ ಕಳೆದ 20 ವರ್ಷದಿಂದ ಹೇಮೆ ಹರಿಯದೇ ರೈತರು ಕಂಗಾಲಾಗಿದ್ದರು. ಈ ಬಾರಿ ಎರಡು ಬಾರಿ ಹೇಮೆ ನೀರು ಹರಿಸಿ ಬಹುತೇಕ ಕೆರೆಗಳಿಗೆ ಭಾಗಶಃ ನೀರು ತುಂಬಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೇಮಾವತಿ ನೀರು ಜಿಲ್ಲೆಗೆ ಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ಸಂಸದ ಬಸವರಾಜು ಅವರ ಶ್ರಮ ಕಾರಣವಾಗಿದೆ. ತುರುವೇಕೆರೆ ಕ್ಷೇತ್ರದಲ್ಲಿ ಎರಡು ಬಾರಿ ಹರಿದ ನೀರು ರೈತರಲ್ಲಿ ಸಂತಸ ತಂದಿದೆ. ಆದರೆ ಹಾಸನ ಭಾಗದ ಜನಪ್ರತಿನಿಧಿಗಳ ಅಡತಡೆಗೆ ನೀರು ಹರಿಯದೇ ನಿಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ನೀರು ಬರುವ ವೇಳೆಗೆ ಮತ್ತಷ್ಟು ಕೆರೆಗಳಿಗೆ ನೀರು ತರಲು ಶ್ರಮಿಸುತ್ತಿದ್ದೇನೆ. ಈ ಕಾರ್ಯಕ್ಕಾಗಿ ಕ್ಷೇತ್ರ ಪ್ರವಾಸ ನಡೆಸಿ ಹೇಮೆ ವಂಚಿತ ಕೆರೆಗಳ ಪಟ್ಟಿ ಹಾಗೂ ವ್ಯರ್ಥ ನಾಲೆಗಳ ಪಟ್ಟಿ ಮಾಡಲಾಗಿದೆ ಎಂದ ಅವರು ಮುಂದಿನ ಮೂರು ದಿನದಲ್ಲಿ ಹಿಂಡಿಸ್ಕೆರೆ ಕೆರೆಗೆ ನೀರು ಹರಿಯುವ ನಾಲೆ ದುರಸ್ಥಿ ನಡೆಸಲಾಗುವುದು ಎಂದರು. ಕೇಂದ್ರ ಸರ್ಕಾರ ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೀಡಾದ ರೈತರ ಬಗ್ಗೆ ಕಾಳಜಿವಹಿಸಿ ಕೊಬ್ಬರಿಗೆ 10,300 ರೂಗಳ ಬೆಂಬಲ ಬೆಲೆ ನಿಗದಿ ಮಾಡಿದೆ. ಈ ಜತೆಗೆ ನೆಫೆಡ್ ಮೂಲಕ ಖರೀದಿಗೆ ಸಜ್ಜುಗೊಳಿಸಲಾಗಿದೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಕೂಡಾ ಸಾಥ್ ನೀಡಿದ್ದು, ಶೀಘ್ರದಲ್ಲಿ ಕೊಬ್ಬರಿ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಜಾರಿಯಾಗಲಿದೆ ಎಂದ ಅವರು ಮಾಸ್ಕ್ ದಿನಾಚರಣೆ ಮೂಲಕ ಜಾಗೃತಿ ಮೂಡಿಸಿದ ಸರ್ಕಾರ ಕೊರೋನಾ ವೈರಸ್‍ನೊಂದಿಗೆ ಬದುಕು ರೂಢಿಸಿಕೊಳ್ಳುವ ಅನಿವಾರ್ಯದ ಬಗ್ಗೆ ತಿಳಿಸಲಾಗುತ್ತಿದೆ. ಸಾರ್ವಜನಿಕರುಜವಾಬ್ದಾರಿಯುತವಾಗಿ ವರ್ತಿಸಬೇಕು. ಈ ಜತೆಗೆ ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಬಗ್ಗೆ ಚರ್ಚೆ ನಡೆದಿದೆ. ಕಂದಾಯ ಸಚಿವರು ಮತ್ತು ಕಾನೂನು ಸಚಿವರು ಒಗ್ಗೂಡಿ ಮುಂದಾಲೋಚನೆಯಲ್ಲೇ ತಿದ್ದುಪಡಿ ಜಾರಿ ಮಾಡಲಿದ್ದಾರೆ. ಯಾರಿಗೂ ಅನ್ಯಾಯವಾಗದು ಎಂದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಭಾನುಪ್ರಕಾಶ್, ಮುಖಂಡರಾದ ಬಿ.ಎಸ್.ನಾಗರಾಜು, ಮಹೇಶ್, ಸುರೇಶ್, ಕುಮಾರ್, ಹಿಂಡಿಸ್ಕೆರೆ ನಾಗರಾಜು, ಸದಾಶಿವು ಇತರರು ಇದ್ದರು.

Leave a Reply

Your email address will not be published. Required fields are marked *