ಹುತಾತ್ಮ ಕರ್ನಲ್ ಕುಟುಂಬಕ್ಕೆ 5 ಕೋಟಿ ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ!
ಹೈದರಾಬಾದ್: ಭಾರತ-ಚೀನಾ ಗಡಿಯಲ್ಲಿ ನಡೆದ ಯೋಧರ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿಕ್ಕುಮಲ್ಲಾ ಸಂತೋಷ್ ಬಾಬು(39) ಅವರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ಐದು ಕೋಟಿ ರೂ. ಪರಿಹಾರ ಮತ್ತು ಕರ್ನಲ್ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ಘೋಷಣೆ ಮಾಡಿದೆ. ನಮ್ಮನ್ನು ಕಾಯುವ ಯೋಧರು ಒಂದೊಮ್ಮೆ ಹುತಾತ್ಮರಾದರೆ ಅವರ ಕುಟುಂಬದ ಬೆಂಬಲಕ್ಕೆ ಇಡೀ ದೇಶವೇ ಒಗ್ಗಟ್ಟಾಗಿರುತ್ತದೆ ಎಂಬ ಸಂದೇಶ ಸಾರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಇದೇ ವೇಳೆ ಹುತಾತ್ಮರಾಗಿರುವ ಇತರ 19 ಸೈನಿಕರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರವನ್ನೂ ಸರಕಾರ ಪ್ರಕಟಿಸಿದೆ. ಕರ್ನಲ್ ಪತ್ನಿಗೆ ಗ್ರೂಪ್-1 ಸರ್ಕಾರಿ ಉದ್ಯೋಗ, ಮನೆ ನಿವೇಶನ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ.