ಹುಚ್ಚ ವೆಂಕಟ್ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಕೇಸ್
ಮಂಡ್ಯ: ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನಟ ಜಗ್ಗೇಶ್, ಎಸ್‍ಪಿ ಶೋಭಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ವೆಂಕಟ್ ಮೇಲೆ ಕೈ ಮಾಡಿದವರ ಮೇಲೆ ಎಫ್‍ಐಆರ್ ದಾಖಲು ಮಾಡಿದ ಮಂಡ್ಯ ಎಸ್‍ಪಿ ಶೋಭಾ ಮೇಡಂ ಅವರಿಗೆ ಕಲಾಪ್ರೇಮಿಗಳು ಧನ್ಯವಾದ ಅರ್ಪಿಸಿ. ಸಹೃದಯಿ ದಕ್ಷ ಅಧಿಕಾರಿ ಸಹೋದರಿಗೆ ನನ್ನ ವೈಯಕ್ತಿಕ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಜೂನ್ 10 ರಂದು ಮಂಡ್ಯದ ಉಮ್ಮಡಹಳ್ಳಿ ಹುಚ್ಚಾ ವೆಂಕಟ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು. ಟೀ ಕುಡಿಯಲು ಬಂದಾಗ ಆತನನ್ನು ರೇಗಿಸಿ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಕುರಿತು ಟೀ ಅಂಗಡಿ ಮುಕ್ರಂ ಪಾಷ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಹಾಗೂ 506(ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿ ಯುವಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.