ಸೇತುವೆ ಉದ್ಘಾಟನೆಯಲ್ಲಿ ತಮ್ಮದೇ ಸರಕಾರದ ನಿಯಮ ಮುರಿದರು! 500ಕ್ಕೂ ಹೆಚ್ಚು ಮಂದಿ ಭಾಗಿ, ಸಾಮಾಜಿಕ ಅಂತರವೂ ಇಲ್ಲ!!

ಮಂಗಳೂರು: ಇಂದು ಮುಂಜಾನೆ ಗುರುಪುರ ನೂತನ ಸೇತುವೆಯನ್ನು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದ್ದು ಈ ವೇಳೆ ಬರೋಬ್ಬರಿ 500ಕ್ಕೂ ಹೆಚ್ಚು ಮಂದಿಯನ್ನು ಸೇರಿಸುವ ಮೂಲಕ ಬಿಜೆಪಿಗರು ತಮ್ಮದೇ ಸರಕಾರದ ನಿಯಮಾವಳಿಯನ್ನು ಮುರಿದಿದ್ದಾರೆ. ಸಾಮಾಜಿಕ ಅಂತರವೂ ಇಲ್ಲದೆ, ಕಾಟಾಚಾರಕ್ಕಷ್ಟೇ ಮಾಸ್ಕ್ ಧರಿಸಿದ ಬಿಜೆಪಿ ಘಟಾನುಘಟಿ ನಾಯಕರ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ರಾಜ್ಯ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಲಾಕ್ ಡೌನ್ ಸಡಿಲಿಕೆಯ ಸಂದರ್ಭ ನಿಯಮಾವಳಿಗಳನ್ನು ವಿಧಿಸಿದೆ. ಆದರೆ ಇವೆಲ್ಲ ಜನಸಾಮಾನ್ಯರಿಗೆ ಮಾತ್ರವೇ ಅನ್ನೋದು ಜನರ ಪ್ರಶ್ನೆ. ಯಾಕೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕವಾಗಿ ಸಭೆ, ಸಮಾರಂಭ ಹಮ್ಮಿಕೊಳ್ಳಬಾರದು, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂಬ ನಿಮಯಾವಳಿದ್ದರೂ 500ಕ್ಕೂ ಹೆಚ್ಚು ಜನರನ್ನು ಸೇರಿಸಿ ಸೇತುವೆ ಉದ್ಘಾಟಿಸಿದ್ದು ಯಾಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾದರೆ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎನ್ನುವ ಪ್ರಶ್ನೆಗೆ ಜನನಾಯಕರೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *