ಸೆಂಟ್ರಲ್ ಮಾರ್ಕೆಟ್ ಬಂದ್: ಬೀದಿಗೆ ಬಿದ್ದ 10 ಸಾವಿರಕ್ಕೂ ಅಧಿಕ ಮಂದಿಯ ಬದುಕು!

ಮಂಗಳೂರು: ಕೊರೊನಾ ಲಾಕ್ ಡೌನ್ ಪ್ರಾರಂಭದ ದಿನಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅಸಾಧ್ಯ ಎಂಬ ನೆಪವೊಡ್ಡಿ ನಗರದ ಸೆಂಟ್ರಲ್ ಮಾರುಕಟ್ಟೆ ಬಂದ್ ಮಾಡಲಾಯಿತು. ಇದರಿಂದ ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳು, ಅಂಗಡಿಗಳ ಕೆಲಸಗಾರರು, ತಲೆಹೊರೆ ಹಾಗೂ ಕೂಲಿ ಕಾರ್ಮಿಕರು, ಮತ್ತವರನ್ನು ಅವಲಂಬಿಸಿರುವ ಕನಿಷ್ಠ 10 ಸಾವಿರಕ್ಕೂ ಅಧಿಕ ಮಂದಿಯ ಬದುಕು ಬೀದಿಗೆ ಬಿದ್ದಂತಾಗಿದೆ. ಸುಮಾರು 50ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಸೆಂಟ್ರಲ್ ಮಾರುಕಟ್ಟೆಯನ್ನು ದುರಸ್ತಿಗೊಳಿಸಬೇಕು ಅಥವಾ ಕೆಡವಿ ಹೊಸ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂಬ ಉದ್ದೇಶ ಆಡಳಿತ ವರ್ಗಕ್ಕೆ ಇದ್ದರೂ ಕೂಡ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಈ ಕಾರ್ಯಕ್ಕೆ ಮುಂದಾಗದು ಎಂಬ ವಿಶ್ವಾಸವು ವ್ಯಾಪಾರಿ ವರ್ಗಕ್ಕೆ ಇತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಧಿಸುತ್ತಲೇ ಸುರಕ್ಷಿತ ಅಂತರದ ನೆಪವೊಡ್ಡಿ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳನ್ನು ಏ.9ರಂದು ಏಕಾಏಕಿ ಬೈಕಂಪಾಡಿಯ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿತ್ತು.
ಮಾರುಕಟ್ಟೆಯ ವ್ಯಾಪಾರಿಗಳ ಸಂಘದ ಮುಖಂಡರು ಮತ್ತು ಕೆಲವು ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಸೆಂಟ್ರಲ್ ಮಾರುಕಟ್ಟೆಯಲ್ಲೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಹೈಕೋರ್ಟ್‍ನ ಮೆಟ್ಟಿಲೇರಿದ್ದರು. ಅಲ್ಲದೆ ಮಾರುಕಟ್ಟೆ ಕೆಡವದಂತೆ ಮತ್ತು ಸ್ಥಳಾಂತರ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆಯನ್ನೂ ತಂದಿದ್ದರು. 2 ತಿಂಗಳ ಬಳಿಕ ಅಂದರೆ ಜೂ.9ರಿಂದ ಮತ್ತೆ ಸೆಂಟ್ರಲ್ ಮಾರುಕಟ್ಟೆಯ ಬೀಗ ಮುರಿದು ಅಲ್ಲೇ ವ್ಯಾಪಾರಕ್ಕೆ ಮುಂದಾಗಿದ್ದರು. ಅದಕ್ಕೆ ಮನಪಾ ಆಡಳಿತವು ಪೊಲೀಸ್ ಬಲಪ್ರಯೋಗದಿಂದ ತಡೆಯೊಡ್ಡಿತ್ತು. ಅಲ್ಲದೆ ಸೆಂಟ್ರಲ್ ಮಾರುಕಟ್ಟೆಯ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಮನಪಾ ಕಡಿತಗೊಳಿಸಿತ್ತು. ಆ ಬಳಿಕ 2-3 ದಿನ ಸುಮ್ಮನಿದ್ದ ಕೆಲವು ವ್ಯಾಪಾರಸ್ಥರು ಮತ್ತೆ ಬೈಕಂಪಾಡಿಯ ಎಪಿಎಂಸಿಗೆ ತೆರಳಿ ವ್ಯಾಪಾರ ಆರಂಭಿಸಿದ್ದಾರೆ. ಆದರೆ ಶೇ.80ರಷ್ಟು ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳು ಇನ್ನೂ ಅತ್ತ ಸುಳಿಯಲಿಲ್ಲ. ಪರಿಣಾಮ ಈ ವ್ಯಾಪಾರಿಗಳು, ಅಂಗಡಿಯಲ್ಲಿ ಕೆಲಸ ಮಾಡುವವರು, ತಲೆಹೊರೆ ಮತ್ತು ಕೂಲಿ ಕಾರ್ಮಿಕರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದ ಸದಸ್ಯರು ಎಂದೆಲ್ಲಾ 10 ಸಾವಿರಕ್ಕೂ ಅಧಿಕ ಮಂದಿಯ ಬದುಕು ಅತಂತ್ರವಾಗಿದೆ.
ಅಂಗಡಿ ವ್ಯಾಪಾರಿಗಳು, ಕೆಲಸಗಾರರು, ಕೂಲಿ ಕಾರ್ಮಿಕರು ಮತ್ತವರ ಕುಟುಂಬದ ಸದಸ್ಯರು ಮನೆಯ ಬಾಡಿಗೆ ಕಟ್ಟಲಾಗದೆ, ವಿದ್ಯುತ್ ಬಿಲ್ ಪಾವತಿಸಲಾಗದೆ, ಹಾಲು-ತರಕಾರಿ-ಮೀನು-ಮಾಂಸ ಖರೀದಿಸಲಾಗದೆ, ಗ್ಯಾಸ್‍ಗೆ ಹಣ ಹೊಂದಿಸ ಲಾಗದೆ, ಬ್ಯಾಂಕ್‍ಗೆ ಸಾಲದ ಕಂತು ತುಂಬಲಾಗದೆ ಕಂಗಾಲಾಗಿದ್ದಾರೆ. ದಾನಿಗಳು ಕೊಟ್ಟ ಅಹಾರ ಸಾಮಗ್ರಿಗಳು ಖಾಲಿಯಾಗುತ್ತಾ ಬಂದಿದ್ದು ಮುಂದೇನು ಎಂದು ತೋಚದೆ ಪರಿತಪಿಸತೊಡಗಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳನ್ನು ಬೈಕಂಪಾಡಿಗೆ ಸ್ಥಳಾಂತರ ಮಾಡಿದ್ದರೂ ಮೂಲಸೌಕರ್ಯವಿಲ್ಲದ ಕಾರಣ ಹೆಚ್ಚಿನ ವ್ಯಾಪಾರಿಗಳು ಅತ್ತ ಸುಳಿಯುತ್ತಿಲ್ಲ. ಹಾಗಾಗಿ ಬೈಕಂಪಾಡಿಯಲ್ಲಿ ಆಸುಪಾಸಿನ ಹೊಸ ವ್ಯಾಪಾರಿಗಳೇ ವ್ಯಾಪಾರಕ್ಕಿಳಿದಿದ್ದಾರೆ. ಇನ್ನು ಹೆಚ್ಚಿನ ವ್ಯಾಪಾರಿ, ಕೆಲಸಗಾರರಿಗೆ ಬೈಕಂಪಾಡಿಯಲ್ಲಿನ ಎಪಿಎಂಸಿಗೆ ತೆರಳಲು ಸಂಚಾರದ ಸಮಸ್ಯೆಯೂ ಎದುರಾಗಿದೆ. ಅಂದರೆ ಬಸ್ ಸಂಚಾರ ಇನ್ನೂ ಪೂರ್ಣವಾಗಿ ಆರಂಭಗೊಂಡಿಲ್ಲ. ಕೆಲವು ಮಂದಿಯಷ್ಟೇ ಸ್ವಂತ ವಾಹನ ಬಳಸುತ್ತಾರೆ. ಇನ್ನು ಕೆಲವರಿಗೆ ಸ್ವಂತ ವಾಹನದಲ್ಲಿ ಓಡಾಡಲು ಆರ್ಥಿಕ ಹೊರೆಯಾಗುತ್ತದೆ.

ನನ್ನ ಮನೆಯಿಂದ ಬೈಕಂಪಾಡಿಗೆ ಹೋಗಿಬರಲು ಸುಮಾರು 80 ಕಿ.ಮೀ. ದೂರ ಕ್ರಮಿಸಬೇಕಿದೆ. ಸೆಂಟ್ರಲ್ ಮಾರುಕಟ್ಟೆಗೆ ಮುಂಜಾನೆ 4 ಗಂಟೆಗೆ ತಲುಪಲು ಮನೆಯಿಂದ 3ಕ್ಕೆ ಹೊರಡುತ್ತಿದ್ದೆವು. ಬೈಕಂಪಾಡಿಗೆ ಹೋಗಲು 2:30ಕ್ಕೆ ಹೊರಡಬೇಕಿದೆ. ನಿದ್ದೆಯಿಲ್ಲ. ನಿದ್ದೆಗೆಟ್ಟು ಬೈಕಂಪಾಡಿಗೆ ಹೋದರೂ ವ್ಯಾಪಾರವಿಲ್ಲ. ವ್ಯಾಪಾರವನ್ನು ನಂಬಿ ಕುರಿಫಂಡ್, ಬ್ಯಾಂಕ್ ಸಾಲ ಮಾಡಿದ್ದೆ. ಈಗ ಅದರ ಕಂತು ಕಟ್ಟುವುದೇ ಸಮಸ್ಯೆಯಾಗಿದೆ. ವಿದ್ಯುತ್, ಗ್ಯಾಸ್ ಮತ್ತು ದಿನವಹಿ ಖರ್ಚಿಗೆ ಹಣವಿಲ್ಲದೆ ಪರದಾಡುವಂತಾಗಿದೆ' -ಚಿಲ್ಲರೆ ವ್ಯಾಪಾರಿ ಎಂ.ಪಿ. ಶಾಹುಲ್ ಹಮೀದ್
ಸೆಂಟ್ರಲ್ ಮಾರ್ಕೆಟ್‍ನಲ್ಲಿ ಬಂದರ್, ಬೆಂಗರೆ, ಕೂಳೂರು, ಕಾವೂರು, ಕಣ್ಣೂರು, ಮಾರಿಪಳ್ಳ, ಅಡ್ಯಾರ್, ಅರ್ಕುಳ, ಉಳ್ಳಾಲ, ತಲಪಾಡಿ, ಕೆ.ಸಿ.ರೋಡ್, ಬೆಳ್ಮ, ದೇರಳಕಟ್ಟೆ, ಹರೇಕಳ, ಪಾವೂರು ಹೀಗೆ ಸುತ್ತಮುತ್ತಲಿನ ನೂರಾರು ಮಂದಿ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಈಗ ಯಾರಿಗೂ ಕೆಲಸವಿಲ್ಲ, ನನ್ನಂತೆ ಎಲ್ಲರೂ ಮನೆಯಲ್ಲೇ ಬಾಕಿಯಾಗಿದ್ದಾರೆ. ಬೈಕಂಪಾಡಿಗೆ ಹೋಗಿ ವ್ಯಾಪಾರ, ಕೆಲಸ ಮಾಡಲು ಸಾಧ್ಯವಿಲ್ಲ. ಒಟ್ಟಾರೆ ಸೆಂಟ್ರಲ್ ಮಾರುಕಟ್ಟೆ ಬಂದ್‍ನಿಂದ ನಮ್ಮ ಬದುಕು ಅತಂತ್ರವಾಗಿದೆ’
-ಕೂಲಿ ಕಾರ್ಮಿಕ ಶಮೀರ್ ಟಿಪ್ಪುನಗರ

`ಸಂಸದರು, ಶಾಸಕರ ಮಾತುಕೇಳಿ ಬೈಕಂಪಾಡಿಗೆ ಬಂದು ತಪ್ಪು ಮಾಡಿದೆವು. ನಾವು ಸೆಂಟ್ರಲ್ ಮಾರುಕಟ್ಟೆಯಲ್ಲೇ ಇದ್ದಿದ್ದರೆ ಇಂತಹ ಸಂಕಷ್ಟ ಆಗುತ್ತಿರಲಿಲ್ಲ. ಬೈಕಂಪಾಡಿಗೆ ಬಂದಾಗ ಸುಡು ಬೇಸಿಗೆ ಇತ್ತು. ವಿದ್ಯುತ್ ಇಲ್ಲ, ನೀರಿಲ್ಲ, ಶೌಚಾಲಯವೂ ಇಲ್ಲ. ಇದೀಗ ಮಳೆಗಾಲ. ಕೆಸರಿನಿಂದ ಕಾಲು ಹಾಕಲೂ ಸಾಧ್ಯವಾಗುತ್ತಿಲ್ಲ. ಹಾವುಗಳ ಕಾಟ ವಿಪರೀತವಾಗಿದೆ. ಇಲ್ಲಿ ವ್ಯಾಪಾರ ಮಾಡಲು ಸಾಧ್ಯವೇ ಆಗುತ್ತಿಲ್ಲ. ಇನ್ನಿಲ್ಲಿ ಡೆಂಗ್-ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹಬ್ಬಿದರೂ ಅಚ್ಚರಿಯಿಲ್ಲ. ನಾವಿನ್ನು ಜಿಲ್ಲಾಧಿಕಾರಿಯಿಂದ ಮಾತ್ರ ನ್ಯಾಯವನ್ನು ನಿರೀಕ್ಷೆ ಮಾಡುತ್ತಿದ್ದೇವೆ’.
-ಮುಸ್ತಫಾ ಕುಂಞ ಅಧ್ಯಕ್ಷರು, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ-ಮಂಗಳೂರು

`ನಾನು ಕಳೆದ 42 ವರ್ಷಗಳಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಯಾಗಿದ್ದೇನೆ. ಬೈಕಂಪಾಡಿಯಲ್ಲಿ ನಾಲ್ಕೈದು ದಿನ ವ್ಯಾಪಾರ ಮಾಡಿದೆ. ಲಾಭಕ್ಕಿಂತ ನಷ್ಟವೇ ಅಧಿಕವಾ ಯಿತು. ನನ್ನ ಖಾಯಂ ಗಿರಾಕಿಗಳು ಕೈ ತಪ್ಪಿದ್ದಾರೆ. ನನ್ನ 20 ಲಕ್ಷ ರೂ. ಗಿರಾಕಿಗಳ ಬಳಿ ಬಾಕಿಯಾಗಿದೆ. ಅದನ್ನು ಮರಳಿ ಪಡೆಯುವುದೇ ಈಗ ಸಮಸ್ಯೆಯಾಗಿದೆ. ಇನ್ನು ಚಿಲ್ಲರೆ ವ್ಯಾಪಾರಿಗಳಿಗೆ ಲೇಡಿಗೋಶನ್, ಪುರಭವನ, ನೆಹರೂ ಮೈದಾನದ ಬಳಿ ತಾತ್ಕಾಲಿಕವಾಗಿ ಹಾಕಿದ ಶೆಡ್‍ನಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನಮ್ಮ ತಕ್ಕಡಿ, ತರಕಾರಿಗೂ ಅದರಲ್ಲಿ ಭದ್ರತೆ ಸಿಗದು. ಒಟ್ಟಿನಲ್ಲಿ ನಮ್ಮನ್ನೆಲ್ಲಾ ಇವರೆಲ್ಲಾ ಸೇರಿ ‘ಬೀದಿಪಾಲು’ ಮಾಡಿ ಬಿಟ್ಟರು. ಒಬ್ಬಳೇ ಮಗಳು, ಕಲಿಯುತ್ತಿದ್ದಾಳೆ. ನನಗೆ ಅವಳ ಬದುಕಿನ ಪ್ರಶ್ನೆಯೇ ಕಾಡುತ್ತಿದೆ. ನನಗೀಗ 62 ವರ್ಷ ಪ್ರಾಯ. ಮುಂದೇನು ಮಾಡುವುದು ಅಂತ ಗೊತ್ತಾಗುತ್ತಿಲ್ಲ.
-ಶಿವರಾಮ ಕುಳಾಯಿ, ತರಕಾರಿ ವ್ಯಾಪಾರಿ-ಸೆಂಟ್ರಲ್ ಮಾರುಕಟ್ಟೆ

1 thought on “ಸೆಂಟ್ರಲ್ ಮಾರ್ಕೆಟ್ ಬಂದ್: ಬೀದಿಗೆ ಬಿದ್ದ 10 ಸಾವಿರಕ್ಕೂ ಅಧಿಕ ಮಂದಿಯ ಬದುಕು!

  1. Mangalore has changed in 50 years. when the population was 3 lakhs it was ok to have a centralised place like SBI area to cater the needs of limited population. Today with more 15 times population, the area looks like a dirty slum. High time people accept change and agree to shift to new location.. Secondly the place is a government property. Government has got every right to take decision considering safety and cleanliness of the surrounding area. Baikampady is definitely a better place for shifting the new wholesale market. If there is any deficiency in the new location those can be overcome with discussion with DC ,PWD, and Police department

Leave a Reply

Your email address will not be published. Required fields are marked *