ಸೂಚನಾಫಲಕಕ್ಕೆ ಪಿಕ್ ಅಪ್ ಡಿಕ್ಕಿ: ಇಬ್ಬರು ಮೃತ್ಯು
ಉಡುಪಿ: ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕ್ ಅಪ್ ವಾಹನ ರಸ್ತೆ ಬದಿಗೆ ಸರಿದು ಸೂಚನಾಫಲಕಕ್ಕೆ ಬಡಿದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿನ ಅಂಬಾಗಿಲು ಬಳಿ ನಡೆದಿದೆ. ಮೃತರನ್ನು ಕುಂದಾಪುರ ಮೂರುಕೈ ನಿವಾಸಿ, ಚಾಲಕ ದಿನೇಶ್(37) ಹಾಗೂ ಇವರ ನೆರೆಮನೆಯ ನಿವಾಸಿ ಮಂಜುನಾಥ್(26) ಎಂದು ಹೆಸರಿಸಲಾಗಿದೆ.
ದಿನೇಶ್ ಕೆಲವು ಸಮಯದಿಂದ ತನ್ನ ಪಿಕ್ ಅಪ್ವಾಹನದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು ಅದಕ್ಕಾಗಿ ತರಕಾರಿ ಖರೀದಿಸಲು ಮನೆಯಿಂದ ಆದಿಉಡುಪಿ ಎಪಿಎಂಸಿ ಮಾರುಕಟ್ಟೆಗೆ ನೆರೆಮನೆಯ ಮಂಜು ನಾಥ್ ಜೊತೆ ಹೋಗುತ್ತಿದ್ದಾಗ ನಸುಕಿನ ಜಾವ ನಿದ್ದೆಯ ಮಂಪರಿನಲ್ಲಿ ರಸ್ತೆ ಬದಿಉ ಸೂಚನ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು ದಿನೇಶ್ ಸ್ಥಳದಲ್ಲಿಯೇ ಮೃತಪಟ್ಟರೆ ಮಂಜುನಾಥ್ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಿನೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ಮಂಜುನಾಥ್ ಅವಿವಾಹಿತರಾಗಿದ್ದರು.