ಸುಶಾಂತ್ ಕುರಿತ `ಸುಸೈಡ್ ಅರ್ ಮರ್ಡರ್’ ಚಿತ್ರಕ್ಕೆ ಸಿದ್ಧತೆ!

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆಯೇ ಸುಶಾಂತ್‍ರ ಜೀವನ ಕುರಿತಾದ ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಸುಶಾಂತ್ ಅನುಭವಿಸಿದ ಮಾನಸಿಕ ಹಿಂಸೆ, ನೋವು, ತೊಳಲಾಟ, ಅವಮಾನ ಹಾಗೂ ಸಾಧನೆ ಎಲ್ಲವನ್ನೂ ಸೇರಿಸಿ ಸಿನಿಮಾ ಮಾಡಲಾಗುತ್ತಿದೆ. ಚಿತ್ರದ ಹೆಸರನ್ನುಸುಸೈಡ್ ಆರ್ ಮರ್ಡರ್’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ.
ಈಗಾಗಲೇ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಇನ್ನೇನು ಚಿತ್ರ ಸೆಟ್ಟೇರುವುದು ಬಾಕಿ ಇದೆ. ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಹುಡುಗ ಕನಸುಗಳ ಬೆನ್ನು ಹತ್ತಿ ಕಾಲೇಜು ಬಿಟ್ಟು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ. ಆರಂಭದಲ್ಲಿ ಹೀರೋಗಳ ಹಿಂದೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗ ಸುಶಾಂತ್, ನಂತರ ಏರಿದ ಎತ್ತರ ಸಾಮಾನ್ಯವಾದುದಲ್ಲ. ಹೀಗಾಗಿ ಸುಶಾಂತ್ ಸುಖ, ದುಃಖ, ಸಾಧನೆ ಕುರಿತು ಸಿನಿಮಾ ಮಾಡಲಾಗುತ್ತಿದೆ. ಸಿನಿಮಾವನ್ನು ವಿಎಸ್‍ಜಿ ಬಿಂಗೆ ಸಂಸ್ಥೆ ನಿರ್ಮಿಸುತ್ತಿದ್ದು, ಪೋಸ್ಟರ್ ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರವಲ್ಲ. ಆದರೆ ಸುಶಾಂತ್ ಸಿಂಗ್ ಬದುಕಿನಿಂದ ಪ್ರೇರಣೆಗೊಂಡು ಕಥೆ ಸಿದ್ಧಪಡಿಸಲಾಗುತ್ತದೆ. ಅಲ್ಲದೆ ಸಿನಿಮಾದಲ್ಲಿ ಯಾವುದೇ ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದಿಲ್ಲ. ಸಿನಿಮಾ ನಾಯಕನನ್ನು ಸಹ ಹೊಸಬರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ನಿರ್ದೇಶಕ ಶಾಮಿಕ್ ಮಾಹಿತಿ ನೀಡಿದ್ದಾರೆ. ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *