ಸಹೋದರಿಯರ ಧಾರಾವಾಹಿ ಜಗಳ: ಓರ್ವಳ ಸಾವು, ಇಬ್ಬರು ಗಂಭೀರ

ಲಕ್ನೋ: ಧಾರಾವಾಹಿ ನೋಡುವ ವಿಚಾರಕ್ಕೆ ಸಂಬಧಿಸಿದಂತೆ ಮೂವರು ಸಹೋದರಿಯರು ಜಗಳ ಮಾಡಿಕೊಂಡು ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ಭಲಸ್ವ ಗ್ರಾಮದಲ್ಲಿ ನಡೆದಿದೆ. ಈ ಪೈಕಿ ಓರ್ವಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಇನ್ನೂ ಗಂಭೀರಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಂಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿದ ಸಹೋದರಿಯರನ್ನು ರೀಟಾ, ಶೀತಲ್ ಮತ್ತು ತನು ಎಂದು ಗುರುತಿಸಲಾಗಿದೆ. ಇದರಲ್ಲಿ ವಿಷ ಸೇವಿಸಿ ರೀಟಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವರದಿಯ ಪ್ರಕಾರ, ಈ ಮೂವರು ಯುವತಿಯರು ಓರ್ವ ಕೂಲಿ ಕಾರ್ಮಿಕನ ಮಕ್ಕಳಾಗಿದ್ದು, ತಂದೆ ಪಿಒಪಿ ಕೆಲಸಗಾರರಾಗಿದ್ದಾರೆ. ಈ ಮೂವರು ಎಂದಿನಂತೆ ಮನೆ ಕೆಲಸ ಮುಗಿಸಿ ಟಿವಿ ನೋಡಲು ಕುಳಿತುಕೊಂಡಿದ್ದಾರೆ. ಈ ವೇಳೆ ಮೂವರು ತನ್ನ ನೆಚ್ಚಿನ ಧಾರಾವಾಹಿಯನ್ನೇ ನೋಡಬೇಕು ಎಂದು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಜಗಳ ಅತಿರೇಕಕ್ಕೆ ಹೋಗಿ ಮನೆಯಲ್ಲೇ ಇದ್ದ ವಿಷವನ್ನು ತೆಗೆದುಕೊಂಡು ತನ್ನ ನೆಚ್ಚಿನ ಧಾರಾವಾಹಿ ಹಾಕದಿದ್ದರೆ, ವಿಷ ಕುಡಿಯುತ್ತೇನೆ ಎಂದು ಒಬ್ಬರಿಗೊಬ್ಬರು ಬೆದರಿಕೆ ಹಾಕಿಕೊಂಡಿದ್ದಾರೆ. ಈ ವೇಳೆ ಬೆದರಿಕೆ ಹಾಕುವಾಗ ರೀಟಾ ನಿಜವಾಗಿಯೇ ವಿಷ ಕುಡಿದಿದ್ದಾಳೆ. ಆ ನಂತರ ಉಳಿದ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಇದನ್ನು ತಿಳಿದ ಊರಿನವರು ಹಾಗೂ ಕುಟುಂಬಸ್ಥರು ಮೂವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರೀಟಾ ಸಾವನ್ನಪ್ಪಿದರೆ, ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದೆ. ಈ ವಿಚಾರ ತಿಳಿದ ಊರಿನ ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ರೀಟಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದೇವೆ. ವರದಿ ಬಂದ ನಂತರ ಹೆಚ್ಚಿನ ತನಿಖೆ ಮಾಡುತ್ತೇನೆ. ಇನ್ನಿಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *