ಶಾಸಕ ಮಸಾಲಾ ಜಯರಾಂ ವಿರುದ್ಧ ಪ್ರತಿಭಟನೆ

ಗುಬ್ಬಿ: ಅನ್ಯಾಯ ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಸುಳ್ಳು ದೂರು ನೀಡುವ ಮೂಲಕ ತುರುವೇಕೆರೆ ಶಾಸಕ ಮಸಾಲಾ ಜಯರಾಂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೂರಾರು ಜೆಡಿಎಸ್ ಕಾರ್ಯಕತರೊಂದಿಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಪೊಲೀಸ್ ಠಾಣೆ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಸಿ.ಎಸ್.ಪುರದಲ್ಲಿ ನಡೆದಿದೆ. ಸರ್ಕಲ್ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಸಿ.ಎಸ್.ಪುರ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಪೊಲೀಸ್ ಠಾಣೆ ಮುಂದೆ ಕುಳಿತು ಮೂರು ತಾಸು ಪ್ರತಿಭಟನೆ ನಡೆಸಿ ಇಡಗೂರು ಗ್ರಾಮದ ಜೆಡಿಎಸ್ ಕಾರ್ಯಕರ್ತ ಆನಂದ್ ವಿರುದ್ಧ ನೀಡಿರುವ ದೂರು ವಾಪಸ್ ಪಡೆಯಲು ಆಗ್ರಹಿಸಿದರು.
ಕೆಲದಿನಗಳ ಹಿಂದೆ ಇಡಗೂರು ಗ್ರಾಮ ಪಂಚಾಯಿತಿಗೆ ತೆರಳಿದ್ದ ಆನಂದ್ ಕಚೇರಿಯಲ್ಲಿ ಕಂಪ್ಯೂಟರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಿಜೆಪಿಯ ಗುತ್ತಿಗೆದಾರರ ವರ್ತನೆಯನ್ನು ಆಕ್ಷೇಪಿಸಿ ಪ್ರಶ್ನಿಸಿದ್ದಾರೆ. ಕೆಲ ಕಾಮಗಾರಿಗಳ ಬಿಲ್ ಗುತ್ತಿಗೆದಾರರೇ ಪಾಸ್ ಮಾಡಿಕೊಳ್ಳುತ್ತಿರುವ ಅನುಮಾನದಲ್ಲೇ ಅಲ್ಲಿನ ಚಿತ್ರಣವನ್ನು ವಿಡಿಯೋ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ನೀಡದ ಗುತ್ತಿಗೆದಾರ ತನ್ನ ಕೆಲಸ ಮಾಡಿಕೊಳ್ಳುತ್ತಿದ್ದನ್ನು ಅಲ್ಲಿನ ಅಧಿಕಾರಿಗಳಿಗೆ ಕೇಳಿದಾಗ ಹಾರಿಕೆ ಉತ್ತರ ಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲು ಮುಂದಾದ ಜೆಡಿಎಸ್ ಕಾರ್ಯಕರ್ತ ಆನಂದ್ ವಿರುದ್ದ ಸಿ.ಎಸ್.ಪುರ ಠಾಣೆಯಲ್ಲಿ ದೂರು ದಾಖಲಿಸಿ ಪಿಎಸ್ಐ ಮೂಲಕ ಧಮ್ಕಿ ಹಾಕಿಸಿರುವುದು ಅಧಿಕಾರ ದುರ್ಬಳಕೆಯಾಗಿದೆ. ಈ ಕೆಲಸಕ್ಕೆ ಶಾಸಕ ಜಯರಾಂ, ಸ್ಥಳೀಯ ರವಿ ಅವರ ಕುಮ್ಮಕ್ಕು ಇದೆ ಎಂದು ಕಿಡಿಕಾರಿದರು.
ಆನಂದ್ ಮನೆಗೆ ತೆರಳಿ ಬೆದರಿಕೆಯೊಡ್ಡಿದ ಪಿಎಸ್ಐ ವಿರುದ್ಧ ಕ್ರಮವಹಿಸಬೇಕು. ಜತೆಗೆ ಅನ್ಯಾಯ ಪ್ರಶ್ನಿಸಿದಕ್ಕೆ ಪೊಲೀಸ್ ದೂರು ನೀಡಿದ ಪಂಚಾಯತಿ ಅಧಿಕಾರಿ ವಿರುದ್ಧ ಕ್ರಮವಹಿಸಬೇಕು ಎಂದು ಆಗ್ರಹಿಸಿದ ಮಾಜಿ ಶಾಸಕರು ಇಡಗೂರು ಪಂಚಾಯಿತಿಯಲ್ಲಿ ಕೋಟ್ಯಾಂತರ ರೂಗಳ ಹಗರಣವೇ ಇದೆ. ಒಬ್ಬನೇ ಗುತ್ತಿಗೆದಾರನಿಗೆ ಕೆಲಸ ನೀಡಿ ಕಮಿಷನ್ ದಂಧೆ ನಡೆಸಲಾಗಿದೆ. ಗುತ್ತಿಗೆದಾರರೇ ಕಂಪ್ಯೂಟರ್ ಬಳಸಿಕೊಂಡು ಬಿಲ್ ಪಾಸ್ ಮಾಡುವ ರೀತಿ ನೋಡಿದರೆ ಪಂಚಾಯಿತಿ ಕೂಡಾ ಬಿಜೆಪಿ ಮುಖಂಡರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಈ ಜತೆಗೆ ಪೊಲೀಸ್ ಸಿಬ್ಬಂದಿ ಅವರ ತಾಳಕ್ಕೆ ಕುಣಿಯುವುದು ಸರಿಯಲ್ಲ. ಈ ಗೂಂಡಾಗಿರಿ ವರ್ತನೆ ಸಾರ್ವಜನಿಕರಲ್ಲಿ ಭಯ ತಂದಿದೆ. ಇವರ ಅನುಚಿತ ವರ್ತನೆಗೆ ಕಡಿವಾಣ ಹಾಕಲು ಜನರೇ ಕಾಯುತ್ತಿದ್ದಾರೆ ಎಂದರು. ಬೀರಮಾರನಹಳ್ಳಿ ನರಸೇಗೌಡ, ತಾಪಂ ಸದಸ್ಯ ತಿಮ್ಮೇಗೌಡ, ಮುಖಂಡರಾದ ನಂಜೇಗೌಡ, ರಾಮು, ಕುಮಾರ್, ಲಕ್ಷ್ಮೀನಾರಾಯಣ ಇತರರು ಇದ್ದರು.