ಶಶಾಂಕ್ ಕಾರ್ಯವೈಖರಿಗೆ ಬಿಸಿಸಿಐ ಗರಂ
ನವದೆಹಲಿ: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನ.15ರ ವರೆಗೂ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡುವ ಕುರಿತು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳದಿರುವುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ಒಟ್ಟಿನಲ್ಲಿ ಶಶಾಂಕ್ ಕಾರ್ಯವೈಖರಿಗೆ ಬಿಸಿಸಿಐಗೆ ತಲೆನೋವು ತಂದಿರುವುದು ಸುಳ್ಳಲ್ಲ. ಶಶಾಂಕ್ ಉದ್ದೇಶ ಪೂರ್ವಕವಾಗಿಯೇ ಬಿಸಿಸಿಐಗೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಟಿ20 ವಿಶ್ವಕಪ್ 2020ರ ಅತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ (ಸಿಎ) ಈಗಾಗಲೇ ಹೇಳಿಕೆ ನೀಡಿದೆ. ಆದರೆ ಐಸಿಸಿ ಮಾತ್ರ ಟಿ20 ವಿಶ್ವಕಪ್ ಭವಿಷ್ಯದ ಕುರಿತಂತೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಒಂದೊಮ್ಮೆ ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ. ಆದರೆ ಸಿಎ ನಿರ್ಧಾರದ ಹೊರತಾಗಿಯೂ ಐಸಿಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಈ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆಸಿರುವ ಬಿಸಿಸಿಐ ಸದ್ಯ ಇಕ್ಕಟ್ಟಿಗೆ ಸಿಲುಕಿದೆ. ಕಳೆದ 4 ವರ್ಷಗಳ ಹಿಂದೆ ಬಿಸಿಸಿಐ ನೆರವಿನೊಂದಿಗೆ ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ ಆಗಿದ್ದರು. ಆದರೆ ಆ ಬಳಿಕ ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಿದ್ದರು. ಸದ್ಯ ಐಪಿಎಲ್ 2020ರ ಆವೃತ್ತಿ ಮೇಲೆ ಆತಂಕ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂ.10 ರಂದೇ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಸಿಸಿ ಈ ಹಿಂದೆ ಹೇಳಿತ್ತು. ಆದರೆ ಯಾರು ಊಹೆ ಮಾಡದಂತೆ ಜುಲೈನಲ್ಲಿ ಈ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಂದೂಡಲಾಗಿತ್ತು. ಪರಿಣಾಮ ಐಪಿಎಲ್ ಕುರಿತು ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಮಸ್ಯೆಯಾಗಿದೆ. ಶಶಾಂಕ್ ಅವರ ಐಸಿಸಿ ಅಧ್ಯಕ್ಷ ಸ್ಥಾನದ ಅವಧಿ ಶೀಘ್ರವೇ ಅಂತ್ಯವಾಗಲಿದೆ. ಆದರೆ ಅಂತಿಮ ಅವಧಿಯಲ್ಲಿ ಏಕೆ ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಟಿ20 ವಿಶ್ವಕಪ್ ನಿರ್ವಹಿಸಲು ಆಸ್ಟ್ರೇಲಿಯಾ ಸಾಧ್ಯವಿಲ್ಲಎಂದು ಸ್ಪಷ್ಟಪಡಿಸಿದೆ. ಆದರೆ ಟೂರ್ನಿಯನ್ನು ಮುಂದೂಡಲು 1 ತಿಂಗಳ ಅವಧಿ ತೆಗೆದುಕೊಳ್ಳುವ ಅಗತ್ಯವೇನಿದೆ ಎಂಬ ಪ್ರಶ್ನೆ ಉದ್ಭವಿಸಿದೆ. 2020ರ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಸರಿ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಎದುರಾಗಲಿದೆ.