ಶಬರಿಮಲೆಗೆ ಭಕ್ತರ ಪ್ರವೇಶ ಸದ್ಯ ನಿಷೇಧ!
ತಿರುವನಂತಪುರ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಸನ್ನಿಧಾನವನ್ನು ಜೂ.14ರಿಂದ ತೆರೆಯುವ ಪ್ರಸ್ತಾಪವನ್ನು ಸರಕಾರ ಕೈಬಿಟ್ಟಿದೆ. ಈ ಬಗ್ಗೆ ತಿರುವಾಂಕೂರು ದೇವಸ್ವ ಮಂಡಳಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ದೇಗುಲದ ಮುಖ್ಯ ತಂತ್ರಿ ಕಾಂತರಾರು ಮಹೇಶ್ ಮೋಹನಾರು ಜೊತೆ ಸಭೆ ನಡೆಸಿದ ಕೇರಳ ಸರ್ಕಾರ, ಶಬರಿಮಲೆ ದೇಗುಲದ ಪ್ರವೇಶವನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡಿದೆ.
ಶಬರಿಮಲೆ ದೇವಸ್ಥಾನದಲ್ಲಿ ಜೂನ್ 14ರಿಂದ ಭಕ್ತರಿಗೆ ಪ್ರವೇಶ ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿತ್ತು. ಆದರೆ ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಹಬ್ಬುತ್ತಿರುವ ಕಾರಣ ಶಬರಿಮಲೆಗೆ ಪ್ರವೇಶ ನಿಷೇಧಿಸಬೇಕು ಎಂದು ದೇವಸ್ವಂ ಬೋರ್ಡ್ ಮನವಿ ಮಾಡಿತ್ತು. ಹೀಗಾಗಿ ಶಬರಿಮಲೆಗೆ ಭಕ್ತರ ಪ್ರವೇಶವನ್ನು ಸದ್ಯಕ್ಕೆ ನಿಷೇಧಿಸಲಾಗಿದೆ. ಶಬರಿಮಲೆಯಲ್ಲಿ ಒಂದೊಮ್ಮೆ ಸನ್ನಿಧಾನ ತೆರೆದಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ಪಂಪಾನದಿಗೆ ಇಳಿಯುತ್ತಾರೆ. ಇದನ್ನು ನಿಷೇಧಿಸಿದಲ್ಲಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾದೀತು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.