ವಿರೋಧದ ನಡುವೆಯೂ ಯಲಹಂಕ ಫ್ಲೈಓವರ್ಗೆ ಸಾವರ್ಕರ್ ಹೆಸರು ಫೈನಲ್

ಬೆಂಗಳೂರು: ಸಾಕಷ್ಟು ವಿರೋಧದಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಯಲಹಂಕ ಫ್ಲೈಓವರ್ಗೆ ಕೊನೆಗೂ ವೀರ್ ಸಾವರ್ಕರ್ ಅವರ ಹೆಸರನ್ನೇ ಇಡಲಾಗಿದೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ರೀತಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ.
ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ, ಯಲಹಂಕ ಡೈರಿ ಸರ್ಕಲ್ ಬಳಿಯ ಫ್ಲೈ ಓವರ್ಗೆ ಸಾವರ್ಕರ್ ಹೆಸರಿಡಲು ನಿರ್ಣಯ ಕೈಗೊಂಡ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕರು, ದೇಶಕ್ಕೆ ರಾಜ್ಯಕ್ಕೆ, ಬೆಂಗಳೂರಿಗೆ ಸಾವರ್ಕರ್ ಕೊಡುಗೆ ಏನೂ ಇಲ್ಲ. ಬೇರೆ ಯಾರಾದರೂ ಮಹನೀಯರ ಹೆಸರಿಡಲಿ ನಮ್ಮ ವಿರೋಧ ಇಲ್ಲ, ಬೇರೆ ರಾಜ್ಯದ ವ್ಯಕ್ತಿಯ, ಯಾವುದೇ ಕೊಡುಗೆ ನೀಡದ ಒಬ್ಬರ ಹೆಸರು ಬೆಂಗಳೂರಿನ ಫ್ಲೈ ಓವರ್ ಗೆ ಇಡುವುದು ಸರಿಯಲ್ಲ. ಇದನ್ನು ನಾವು ವಿರೋಧಿಸುತ್ತೇವೆ ಎಂದರು. ಆದರೆ ಇವೆಲ್ಲ ಗದ್ದಲದ ನಡುವೆ ಸಾವರ್ಕರ್ ಹೆಸರನ್ನು ಇಡುವುದು ಅಂತಿಮಗೊಳಿಸಲಾಯಿತು.
ಸಾವರ್ಕರ್ ಅವರ ಜನ್ಮ ದಿನದಂದು ಯಲಹಂಕ ಫ್ಲೈಓವರ್ಗೆ ಅವರ ಹೆಸರಿಡಲು ಉದ್ದೇಶಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ ಹಿನ್ನೆಲೆ ಹೆಸರಿಡುವ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ಸಾವರ್ಕರ್ ಹೆಸರಿಟ್ಟು ಸ್ವಾತಂತ್ರ್ಯಯೋಧನಿಗೆ ಗೌರವ ಅರ್ಪಣೆ ಮಾಡಲಾಗಿದೆ.