ಲಾರಿಯ ಧಾವಂತಕ್ಕೆ ತಂದೆ-ಮಗು ಬಲಿ, ಕುಟುಂಬದಲ್ಲಿ ಮಡುಗಟ್ಟಿದ ಶೋಕ!
ಮಂಗಳೂರು: ನಿನ್ನೆ ಸಂಜೆ ಬೈಕಂಪಾಡಿ ಜಂಕ್ಷನ್ ಬಳಿ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಅಮ್ಮನ ಕೈಯಲ್ಲಿ ಕುಳಿತಿದ್ದ 4 ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದರೆ ಗಂಭೀರ ಗಾಯಗೊಂಡಿದ್ದ ಮಗುವಿನ ತಂದೆಯೂ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತನ್ನ ಮುದ್ದಿನ ಗಂಡ ಹಾಗೂ ಮನೆಯ ತುಂಬಾ ನಗು ಹಂಚುತ್ತಿದ್ದ ಮಗುವನ್ನು ಕಳೆದುಕೊಂಡ ಮಹಿಳೆ ಆಸ್ಪತ್ರೆ ಸೇರಿದ್ದರೆ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಮೃತರನ್ನು ಕೃಷ್ಣಾಪುರ ನಿವಾಸಿ ಅಬ್ದುಲ್ ಬಶೀರ್ ಹಾಗೂ ಪುತ್ರ ಮೂರು ವರ್ಷದ ಮಗು ಶಯಾನ್ ಎಂದು ಹೆಸರಿಸಲಾಗಿದೆ. ಅಬ್ದುಲ್ ಬಶೀರ್ ತಮ್ಮ ಸ್ಕೂಟರ್ನಲ್ಲಿ ಪತ್ನಿ ಮತ್ತು ಮಗ ಶಯಾನ್ ಜತೆ ನಿನ್ನೆ ಸಂಜೆ ವೇಳೆ ಮಂಗಳೂರಿನಿಂದ ಕೃಷ್ಣಾಪುರಕ್ಕೆ ತೆರಳುತ್ತಿದ್ದ ವೇಳೆ ಬೈಕಂಪಾಡಿ ಜಂಕ್ಷನ್ ಬಳಿ ಲಾರಿ ಸ್ಕೂಟರ್ಗೆ ಡಿಕ್ಕಿಯಾಗಿದೆ. ಇದರಿಂದ ಮೂವರೂ ರಸ್ತೆಗೆ ಬಿದ್ದಿದ್ದು ಮಗು ಶಯಾನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಬಶೀರ್ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.