ಲಾಕ್-ಅನ್ ಲಾಕ್ ಮಧ್ಯೆ ನಲುಗಿದ ಕರಾವಳಿಯ `ಕಲಾವಿದರು’!

ಮಂಗಳೂರು: ನಾಟಕರಂಗ, ಸಿನಿಮಾ, ಯಕ್ಷಗಾನ ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ ಅಸಂಖ್ಯ ಕರಾವಳಿಯ ಕಲಾವಿದರ ಬದುಕು ಅಕ್ಷರಶ: ಬೀದಿಗೆ ಬಿದ್ದಂತಾಗಿದೆ. ಲಾಕ್ ಡೌನ್ ಸಂದರ್ಭ ಸಮಾಜಮುಖಿ ಸಂಘಟನೆಗಳು, ಕೊಡುಗೈ ದಾನಿಗಳು ಅಷ್ಟಿಷ್ಟು ಸಹಾಯಹಸ್ತ ಚಾಚಿದ್ದರಲ್ಲೇ ಸಂಸಾರದ ಜವಾಬ್ದಾರಿ ನಿರ್ವಹಿಸಿದ್ದ ಕಲಾವಿದರು ಈಗ ಅಲ್ ಲಾಕ್ ಅವಧಿಯಲ್ಲಿ ಯಾರೂ ಕೇಳುವವರಿಲ್ಲದೆ ಮನೆಗಳಲ್ಲಿ ಕೂತು ಆಗಸ ದಿಟ್ಟಿಸುವಂತಾಗಿದೆ. ಸರಕಾರವಾಗಲೀ, ಸ್ಥಳೀಯಾಡಳಿತವಾಗಲೂ ಕಲಾವಿದರ ಸಂಕಷ್ಟಕ್ಕೆ ನೆರವಾಗಿಲ್ಲ. ಸಮಾಜದ ಇತರ ವರ್ಗದ ಕಾರ್ಮಿಕರಿಗೆ ಅಲ್ಪಸ್ವಲ್ಪ ಸಹಾಯಧನವನ್ನು ಸರಕಾರ ಘೋಷಣೆ ಮಾಡಿದ್ದರೆ ಕಲಾವಿದರಿಗೆ ಯಾವ ನೆರವನ್ನೂ ಘೋಷಿಸಿಲ್ಲ. ಕಲೆಯನ್ನೇ ನಂಬಿಕೊಂಡು ತಮ್ಮ ಮತ್ತು ತಮ್ಮನ್ನೇ ನಂಬಿರುವ ಕುಟುಂಬ ಸದಸ್ಯರ ಜೀವನ ನಿರ್ವಹಣೆ ಮಾಡಿಕೊಂಡಿದ್ದ ಕಲಾವಿದರು ಈಗ ಬಣ್ಣದ ಬದುಕನ್ನು ನಂಬಿ ಕೆಟ್ಟೆವು ಎಂದು ದಿಕ್ಕೆಟ್ಟು ಕೂತಿದ್ದಾರೆ. ಎಲ್ಲಾ ಸರಿಯಿದ್ದಾಗ ಕಲಾವಿದರನ್ನು ಕರೆದು ಮಾತಾಡುತ್ತಿದ್ದವರು, ಸಂಘ ಸಂಸ್ಥೆಗಳಲ್ಲಿ ಕರೆದು ಕಾರ್ಯಕ್ರಮವನ್ನೋ ಸನ್ಮಾನವನ್ನೋ ಏರ್ಪಾಟು ಮಾಡುತ್ತಿದ್ದವರು ಈಗ ಕಾಣೆಯಾಗಿದ್ದಾರೆ. ಕರೆದರೆ ಎಲ್ಲಿ ತಮ್ಮ ಗಂಟು ಖಾಲಿಯಾಗುತ್ತೋ ಎಂಬ ಭಯದಿಂದ ಕಲಾವಿದರನ್ನು ಮಾತಾಡಿಸಲು ಹಿಂದೆಮುಂದೆ ನೋಡುವವರೂ ಇದ್ದಾರೆ. ಸದ್ಯ ದೇಶದೆಲ್ಲೆಡೆ ಲಾಕ್ ಡೌನ್ ಮುಗಿದುಅನ್ ಲಾಕ್’ ಆರಂಭವಾಗಿದೆ. ಆದರೆ ಜನರ ಬದುಕು ಸುಧಾರಿಸಲು ಮತ್ತೆ ಹಿಂದಿನಂತಾಗಲು ಇನ್ನೂ ಸಾಕಷ್ಟು ಸಮಯ ಬೇಕು. ನಾಟಕ ಸೇರಿದಂತೆ ರಂಗಭೂಮಿಯ ಕಲಾವಿದರು ಇನ್ನು ಬಣ್ಣ ಹಚ್ಚಿ ಸ್ಟೇಜ್ ಮೇಲೆ ಪ್ರದರ್ಶನ ನೀಡಲು ಕಮ್ಮಿಯಂದರೂ ಒಂದು ವರ್ಷ ಬೇಕಾದೀತು. ಹೀಗಿರುವಾಗ ಅವರ ಬದುಕಿಗೆ ಯಾರು ಬೆಂಬಲವಾಗಿ ನಿಲ್ಲುತ್ತಾರೆ? ಕಲೆಯನ್ನೇ ಉಸಿರಾಡುತ್ತಿದ್ದ ಕಲಾವಿದರ ರಕ್ಷಣೆ ಮಾಡುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಮಾತ್ರ ಶೂನ್ಯ. ಟಿವಿ ಧಾರಾವಾಹಿ, ಸಿನಿಮಾಗಳಲ್ಲಿ ಸಹನಟ-ನಟಿಯರಾಗಿದ್ದವರು ಕಷ್ಟಪಟ್ಟು ಮತ್ತೆ ಬೆಂಗಳೂರು ಸೇರಿದ್ದಾರೆ. ಆದರೆ ಅಲ್ಲೂ ಕೊರೊನಾ ಮಹಾಮಾರಿ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು ಬಹುತೇಕ ಧಾರಾವಾಹಿ, ಶೋಗಳ ಶೂಟಿಂಗ್ ವಾರಕ್ಕೆ ಒಂದೆರಡು ದಿನ ನಡೆದರೆ ಪುಣ್ಯ. ಹೀಗಾದರೆ ಬಾಡಿಗೆ, ಸಂಚಾರಕ್ಕೆ ಬೇಕಾದ ಖರ್ಚು, ಆಹಾರ ಇತ್ಯಾದಿ ಭರಿಸಲಾಗದೆ ಮತ್ತೆ ಊರು ಸೇರಬೇಕಾದ ಪರಿಸ್ಥಿತಿ ಬಂದೊದಗಿದೆ.
ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹತ್ತಾರು ರಂಗಭೂಮಿಯ ನಾಟಕ ತಂಡಗಳಿವೆ. ನೂರಾರು ಕಲಾವಿದರು ತಂಡಗಳಲ್ಲಿ ದುಡಿಯುತ್ತಿದ್ದಾರೆ. ಅವರೆಲ್ಲರಿಗೂ ಕೊರೊನಾ ಲಾಕ್ ಡೌನ್ ಮತ್ತು ಅನ್ ಲಾಕ್ ನುಂಗಲಾರದ ತುತ್ತಾಗಿದ್ದು ದಿನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬಡಪಾಯಿ ಕಲಾವಿದರು ಇದೇ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ಇದಕ್ಕೆ ಜವಾಬ್ದಾರಿ ಯಾರು ಎಂದು ಸರಕಾರ ಚಿಂತಿಸುವ ಅಗತ್ಯವಿದೆ. ಬಣ್ಣ ಹಚ್ಚಿಕೊಂಡು ನಗಿಸುವ, ಜನರಿಗೆ ಮನರಂಜನೆ ನೀಡುವ ಕಲಾವಿದರ ಬದುಕು ಕಮರುವ ಮುನ್ನ ಸಂಬಂಧಪಟ್ಟ ಇಲಾಖೆಗಳು, ಸರಕಾರ ಎಚ್ಚೆತ್ತುಕೊಂಡು ರಕ್ಷಣೆಗೆ ಮುಂದಾದಲ್ಲಿ ಕಲಾವಿದರು ಇನ್ನುಳಿದ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯಬಹುದು.

Leave a Reply

Your email address will not be published. Required fields are marked *