`ರಾಜ್ಯಸಭಾ ಸ್ಥಾನದ ಆಕಾಂಕ್ಷಿ ಹೊರತು ವಿಧಾನ ಪರಿಷತ್ ಸ್ಥಾನಕ್ಕೆ ಆಕಾಂಕ್ಷಿಯಲ್ಲ’- ಕೆ. ಪ್ರಕಾಶ್ ಶೆಟ್ಟಿ

ಬೆಂಗಳೂರು: ನಾನು ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಎಂ ಆರ್ ಜಿ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ನಾನು ಕಳೆದ ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚೆಗೆ ನನಗೆ ರಾಜ್ಯಸಭಾ ಸದಸ್ಯರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಹೈಕಮಾಂಡ್‍ಗೆ ಶಿಫಾರಸ್ಸು ಮಾಡಿತ್ತು. ಆದರೆ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಇಬ್ಬರು ಹಿರಿಯ ಕಾರ್ಯಕರ್ತರನ್ನು ಹೈಕಮಾಂಡ್ ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಸಾರ್ವಕಾಲಿಕ ಸತ್ಯವನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಒಪ್ಪಿಕೊಂಡು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಹಾಗೂ ಪಕ್ಷದ ನಿರ್ಧಾರದ ಬಗ್ಗೆ ಯಾರೂ ಬೇಸರ ವ್ಯಕ್ತಪಡಿಸಬಾರದಾಗಿ ಅವರು ಮನವಿ ಮಾಡಿದ್ದಾರೆ. ಈ ಮಧ್ಯೆ ಮುಂದೆ ನಡೆಯುವ ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯೆನ್ನುವಂತೆ ನನ್ನನ್ನು ಬಿಂಬಿಸಲಾಗಿದೆ. ಪಕ್ಷಕ್ಕಾಗಿ ನಾನು ನೀಡಿದ ಸೇವೆಯನ್ನು ಗುರುತಿಸಿ, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಹೆಸರನ್ನು ಶಿಫಾರಸ್ಸು ಮಾಡಿರುವ ಎಲ್ಲಾ ಮುಖಂಡರಿಗೆ ವಂದಿಸುತ್ತಾ, ನಾನು ರಾಜ್ಯಸಭಾ ಸ್ಥಾನದ ಆಕಾಂಕ್ಷಿಯೇ ಹೊರತು ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿಯಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಪ್ರಕಟಣೆಯಲ್ಲಿ ಕೆ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *