ರಸ್ತೆ ಮಧ್ಯೆ ಮುರಿದು ಬಿದ್ದ ಬಿದಿರು, ಮನಪಾ ಕಣ್ಣಿದ್ದೂ ಕುರುಡು!
ಮಂಗಳೂರು: ನಗರದ ಬಿಜೈ ಚರ್ಚ್ ಬಳಿಯಿಂದ ಕೆಪಿಟಿ ಕಡೆ ಹೋಗುವ ರಸ್ತೆಯಲ್ಲಿ ಗಾಳಿ ಮಳೆಗೆ ಒಣಗಿದ ಬಿದಿರು ಮುರಿದು ಬಿದ್ದು ಕಾಂಕ್ರೀಟ್ ರಸ್ತೆಯ ಅರ್ಧ ಭಾಗ ಆಕ್ರಮಿಸಿದ್ದರೆ ಬಿದಿರಿನ ಮೆಳೆ ಸಂಪೂರ್ಣ ರಸ್ತೆಗೆ ಬಾಗಿ ಇನ್ನೇನು ಮುರಿದು ಬೀಳುವ ಸ್ಥಿತಿಗೆ ತಲುಪಿದ್ದರೂ ಮನಪಾ ಕಣ್ಣಿದ್ದೂ ಕುರುಡಾಗಿದೆ.
ಬಿಜೈ ಶ್ರೀಮಂತಿ ಬಾಯಿ ಮ್ಯೂಸಿಯಂ ಮುಂಭಾಗ ಕಾಂಕ್ರೀಟ್ ರಸ್ತೆಯಲ್ಲಿ ಬಿದಿರು ಮುರಿದು ವಾಹನ ಸವಾರರಿಗೆ ಕಂಟಕ ಎದುರಾಗಿದೆ. ರಸ್ತೆಯಲ್ಲಿ ಬಿದಿರು ಗಮನಿಸದೆ ಒಂದೊಮ್ಮೆ ಬದಿಗೆ ಚಲಿಸಿದಲ್ಲಿ ಬಿದಿರಿನ ತುದಿ ಬಡಿದು ಸ್ಕಿಡ್ ಆಗುವ ಸಂಭವವಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ, ಮನಪಾ ಎಚ್ಚೆತ್ತು ಬಿದಿರು ಕಡಿದು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವರೇ ಕಾದು ನೋಡಬೇಕಿದೆ.
