ಯುವ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಳಿನ್, ಕಾಮತ್! ಮಿಥುನ್ ರೈ ಪ್ರತಿಭಟನಾ ಶೈಲಿಗೆ ಕಾರ್ಯಕರ್ತರು ಫಿದಾ!!

ಮಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ನಗರದಲ್ಲಿ ಭರ್ಜರಿ ಪ್ರತಿಭಟನೆ ನಡೆಸಿದ್ದು ಪ್ರತಿಭಟನೆಯಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕೂಡಾ ಕಂಡುಬಂದರು. ಅಚ್ಚರಿಪಡಬೇಡಿ, ಯಾಕೆಂದರೆ ಅವರು ನೇರವಾಗಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ನಡೆದ ಬೆಲೆಯೇರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಕಟೀಲ್, ಕಾಮತ್ ಮುಖವಾಡ ಬಳಸಿದ್ದು ಮಿಥುನ್ ಪ್ರತಿಭಟನಾ ಶೈಲಿಗೆ ಕಾರ್ಯಕರ್ತರು ಫಿದಾ ಆಗಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಇದರ ವಿರುದ್ಧ ದಕ್ಷಿಣ ಕನ್ನಡ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಮಂಗಳೂರು ಪುರಭವನ ಮುಂದೆ ನಡೆಯಿತು. ನಗರದ ಜ್ಯೋತಿ ವೃತ್ತದಿಂದ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೈಕಲ್ ನಲ್ಲಿ ರ್ಯಾಲಿ ನಡೆಸಿ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಮಾತಾಡಿದ ಮಿಥುನ್ ರೈ ಅವರು, ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರೆಲ್ ಗೆ
160 ರೂ. ಇರುವಾಗ ಕಾಂಗ್ರೆಸ್ ಸರಕಾರ 60 ರೂಪಾಯಿಗೆ ಪೆಟ್ರೋಲ್ ನೀಡುತ್ತಿದ್ದು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿಗರು ಈಗ ದಿನನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದರೂ ಮೌನವಾಗಿದ್ದಾರೆ’ ಎಂದು ಕಿಡಿಕಾರಿದರು. `ನೆರೆರಾಷ್ಟ್ರ ಪಾಕಿಸ್ತಾನ ಜನರಿಗೆ ಕೊರೊನಾ ಸಂದರ್ಭದಲ್ಲಿ ಹೊರೆಯಾಗಬಾರದೆಂದು 30 ರೂ.ಗೆ ಪೆಟ್ರೋಲ್ ನೀಡುತ್ತಿದೆ, ಆದರೆ ನಮ್ಮಲ್ಲಿ ಜನರು ಸತ್ತರೂ ಪರವಾಗಿಲ್ಲ ಎಂದು ಬೆಲೆಯೇರಿಕೆ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ದೇಶಕ್ಕಿಂತ ದೊಡ್ಡದಾದರೆ ಹೀಗೇ ಆಗುತ್ತದೆ. ಪ್ರಧಾನಿಗೆ ದೇಶಾದ್ಯಂತ ಏಜೆಂಟ್ ಗಳಿದ್ದಾರೆ. ಸುಳ್ಳುಗಳ ಚಕ್ರವರ್ತಿ ಆಗಿರುವ ಚಕ್ರವರ್ತಿ ಸೂಲಿಬೆಲೆ ಅವರು ಪ್ರಧಾನಿ ಹಾಗೆ ಮಾಡುತ್ತಾರೆ ಹೀಗೆ ಮಾಡುತ್ತಾರೆ ಎಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

