`ಯುಎಇ ಕನ್ನಡಿಗಾಸ್ ಹೆಲ್ಪ್ ಲೈನ್’ ಗೆ ಕನ್ನಡಿಗರ ಬಹುಪರಾಕ್!

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅದೆಷ್ಟೋ ಜನರ ಬದುಕು ದುಸ್ತರವಾಗಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲಿ ಬಾಕಿಯಾದವರನ್ನು ವಾಪಸ್ ಕರೆತರಲು ಕೇಂದ್ರ ಸರಕಾರವೇನೋ ಶ್ರಮಿಸುತ್ತಿದೆ. ಆದರೆ ಈ ಮಧ್ಯೆ ಅನೇಕಾನೇಕ ಸಾಮಾಜಿಕ ಸಂಘಟನೆಗಳೂ ಕೂಡಾ ಸರಕಾರದ ಜೊತೆ ಕೈಜೋಡಿಸಿವೆ. ಇವುಗಳಲ್ಲಿ ಪ್ರಮುಖವಾದುದು `ಯುಎಇ ಕನ್ನಡಿಗಾಸ್ ಹೆಲ್ಪ್ ಲೈನ್’ ಕೊಲ್ಲಿ ರಾಷ್ಟ್ರದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಸಂಘಟನೆ ಸ್ಥಾಪಿಸಿ ಮಾಡುತ್ತಿರುವ ಸಮಾಜಸೇವೆ ಮಾಡುತ್ತಿರುವ ಸಮಾನ ಮನಸ್ಕರ ತಂಡವು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಗಮನ ಸೆಳೆದಿದೆಯಲ್ಲದೆ ದೇಶ ಮಾತ್ರವಲ್ಲದೆ ವಿದೇಶದಲ್ಲಿರುವ ಅಸಂಖ್ಯ ಕನ್ನಡಿಗರ ಹೃದಯವನ್ನೂ ಗೆದ್ದಿದೆ. ಸ್ವಾರ್ಥ ಲಾಭಕ್ಕಾಗಿಯೋ, ಪ್ರಚಾರದ ತೆವಲಿಗಾಗಿಯೋ ಸಮಾಜಸೇವೆ ಅನ್ನೋ ಲೇಬಲ್ ಅಂಟಿಸಿಕೊಂಡು ಓಡಾಡುವ ಸಮಾಜಸೇವಕರ ಮಧ್ಯೆ ಕನ್ನಡಿಗಾಸ್ ಹೆಲ್ಪ್ ಲೈನ್ ತನ್ನ ಕಾರ್ಯವೈಖರಿಯ ಮಧ್ಯೆ ವಿಶೇಷವಾಗಿ ನಿಲ್ಲುತ್ತದೆ.
ಅನಿವಾಸಿ ಭಾರತೀಯ ಉದ್ಯಮಿಗಳಾದ ನವೀದ್ ಮಾಗುಂಡಿ ಮತ್ತು ಹಿದಾಯತ್ ಅವರ ಕಲ್ಪನೆಯ ಕೂಸಾಗಿದ್ದು ಹೋಟೆಲ್ ಉದ್ಯಮಿ ಹಾಗೂ ಕರ್ನಾಟಕ ಎನ್‍ಐಆರ್ ಸಂಘಟನೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರೂ ಸಂಘಟನೆಗೆ ಕೈಜೋಡಿಸಿದ್ದಾರೆ. ಚಂದ್ರಶೇಖರ ಲಿಂಗದಹಳ್ಳಿ, ಇವಾನ್ ಖಾನ್, ದಯಾ ಕಿರೋಡಿಯನ್, ಹರೀಶ್ ಶೇರಿಗಾರ್, ಸುನೀಲ್ ಅಂಬಲವೆಲೀಲ್, ಅಶ್ರಫ್ ಕೆ.ಎಂ., ಯೂಸುಫ್ ಬ್ರಹ್ಮಾವರ, ನೋಯಲ್ ಅಲ್ವೇಡಾ, ಯಶವಂತ ಕರ್ಕೇರ, ಸಯ್ಯದ್ ಅಫ್ತುಲ್, ಅಲ್ತಾಫ್ ಹುಸೇನ್, ಶಶಿಧರ ನಾಗರಾಜಪ್ಪ, ರೊನಾಲ್ಡ್ ಮಾರ್ಟಿಸ್, ಅನ್ಸಾರ್ ಬಾರ್ಕೂರ್, ಸಿರಾಜ್ ಪರ್ಲಡ್ಕ, ಚಾನ್ಸಸ್ ವಾರ್ಟಸ್, ಆಲ್ಫಾಕ್ ಸಾದ್ ಹೀಗೆ ಸುಮಾರು 20 ಮಂದಿ ಸಮಾನಮನಸ್ಕರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದು ಅನಿವಾಸಿ ಕನ್ನಡಿಗರ ಪಾಲಿಗೆ ಆಪದ್ಭಾಂಧವರಾಗಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ನಿಮ್ಮ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇನೆ ಎಂದು ಹೇಳುವ ಮೂಲಕ ಈ ತಂಡದ ಸೇವೆಗೆ ಸರಕಾರಿ ಮಾನ್ಯತೆ ನೀಡಲು ಮುಂದಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುವ ಈ ತಂಡವು ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಆಹಾರ, ಆರೋಗ್ಯ ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಕನ್ನಡಿಗರಿಗೆ ವಿಮಾನಯಾನ ವ್ಯವಸ್ಥೆ ಮಾಡುವಲ್ಲೂ ಇವರು ಕರ್ನಾಟಕ ಡಿಸಿಎಂ ಅಶ್ವತ್ ನಾರಾಯಣ ಹಾಗೂ ಇತರ ಕೆಲವು ಕೇಂದ್ರ ಸಚಿವರ ಜತೆ ಸೇರಿಕೊಂಡು ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಮೇ 10ರಂದು ನಗರಕ್ಕೆ ಬಂದ ವಿಮಾನದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 180 ಕನ್ನಡಿಗರನ್ನು ಕರೆತರಲಾಗಿತ್ತು. ವಿಮಾನಯಾನದ ಬಗ್ಗೆ ವಿದೇಶಾಂಗ ಇಲಾಖೆಗೆ ಒತ್ತಡ ಹೇರಲು ಬೇಡಿಕೆ ಇರಿಸಿದ್ದಲ್ಲದೆ ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರನ್ನು ಸಂಪರ್ಕಿಸಿದ ಸಂಘಟನೆ ಒತ್ತಡ ಹೇರಿತ್ತು. ಮೊದಲ ಪಟ್ಟಿಯಲ್ಲಿ ಯುಎಇಯಿಂದ ಒಂದು ವಿಮಾನ ನಮ್ಮ ರಾಜ್ಯಕ್ಕೆ ಬರಲೇ ಬೇಕು, ನಾನು ಶತಾಯ ಗತಾಯ ಪ್ರಯತ್ನ ಮಾಡಿ ಖಂಡಿತಾ ನಿಮ್ಮ ಬೇಡಿಕೆ ಈಡೇರಿಸುವೆ ಎಂದು ಭರವಸೆ ನೀಡಿ ವಿದೇಶಾಂಗ ಇಲಾಖೆಯ ಸೆಕ್ರೆಟರಿ ಜೊತೆ ಮಾತನಾಡಿ ಕೊಟ್ಟ ಮಾತಿನಂತೆ ಯುಎಇಯಿಂದ ಹಾರಲಿರುವ ವಿಮಾನಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕವನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಕನ್ನಡಿಗಾಸ್ ಹೆಲ್ಪ್ ಲೈನ್ ಕಾರ್ಯವನ್ನೂ ಶ್ಲಾಘಿಸಿ ಶುಭ ಹಾರೈಸಿದ್ದಾರೆ.
ಹೀಗೆ ಕೊಲ್ಲಿ ರಾಷ್ಟ್ರಗಳಿಂದ ನಮ್ಮವರನ್ನು ವಾಪಸ್ ಕರೆತರಲು ಪಣತೊಟ್ಟಿರುವ ಕನ್ನಡಿಗಾಸ್ ಹೆಲ್ಪ್ ಲೈನ್ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಏನೇ ಸಹಾಯ ಬೇಕಿದ್ದರೂ ಹೇಳಿ ಎಂದಿರುವ ಸಂಘಟನೆ ಅದೆಷ್ಟೋ ಮಂದಿಗೆ ನೆರವನ್ನು ಚಾಚಿದೆ. ನಮ್ಮ ಮಧ್ಯೆ ಪ್ರಚಾರಕ್ಕಾಗಿ ಕಿಟ್ ಕೊಟ್ಟು ಫೊಟೋ ತೆಗೆಸಿಕೊಳ್ಳುವವರು ಈಗ ಲಾಕ್ ಡೌನ್ ಸಡಿಲಿಕೆಯಾಗಿದ್ದೇ ತಡ ಕಾಣೆಯಾಗಿದ್ದಾರೆ. ಆದರೆ ಕನ್ನಡಿಗಾಸ್ ಹೆಲ್ಪ್ ಲೈನ್ ನಿರಂತರ ಸೇವೆಯಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಿದೆ.

Leave a Reply

Your email address will not be published. Required fields are marked *