ಯಡ್ಡಿಯಿಂದ ಶೋಭಾ ದೂರ!

ಮಂಗಳೂರು: ಒಂದು ಕಾಲದಲ್ಲಿ ಶೋಭಾ ಕರಂದ್ಲಾಜೆ ಸಲಹೆಯಿಲ್ಲದೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದ ಯಡಿಯೂರಪ್ಪ ಈಗೀಗ ಅವರ ಮಾತಿಗೆ ಬೆಲೆ ಕೊಡುತ್ತಿಲ್ಲವಂತೆ. ಅಷ್ಟೇ ಏಕೆ, ಈಗ ಸಲಹೆ ನೀಡಲೂ ಶೋಭಾ ಧೈರ್ಯ ತೋರಿಸುತ್ತಿಲ್ಲವಂತೆ. ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಯಡಿಯೂರಪ್ಪನವರು ಶೋಭಾರನ್ನು ದೂರ ಇಟ್ಟುಕೊಂಡಿದ್ದಾರಂತೆ. ಇದು ಉದ್ದೇಶಪೂರ್ವಕ ಕ್ರಮವೋ, ಅಥವಾ ಬಲವಂತದ ಕ್ರಮವೋ ಎಂಬುದು ಇನ್ನೂ ಖಚಿತವಾಗಿಲ್ಲ.
ಒಂದು ಮೂಲದ ಪ್ರಕಾರ ಬಿ.ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರೇ ಇವರಿಬ್ಬರ ನಡುವೆ ಅಡ್ಡಗೋಡೆಯಾಗಿದ್ದಾರಂತೆ. ಶೋಭಾರ ಮಾತಿಗೆ ಯಡಿಯೂರಪ್ಪನವರು ಅತಿಯಾಗಿ ಕಿವಿಗೊಟ್ಟ ಕಾರಣದಿಂದ ಪಕ್ಷದೊಳಗೆ ಅಸಮಾಧಾನ ಎದುರಿಸಬೇಕಾಗಿ ಬಂದಿತ್ತು. ಪಕ್ಷ ಮತ್ತು ಯಡಿಯೂರಪ್ಪರನ್ನು ಶೋಭಾರೇ ನಿಯಂತ್ರಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದು ಯಡಿಯೂರಪ್ಪರ ಗೌರವಕ್ಕೂ ಚ್ಯುತಿ ತಂದಿತ್ತು. ಇತರ ಕೆಲವು ಪ್ರಮುಖ ನಾಯಕರು ಕೂಡ ಯಡಿಯೂರಪ್ಪ ವಿರುದ್ಧ ಶೀತಲ ಸಮರದಲ್ಲಿ ತೊಡಗಿಕೊಳ್ಳಲೂ ಕಾರಣವಾಗಿತ್ತು. ಅದು ಇಡೀ ಪಕ್ಷದ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುವಂತಾಗಿತ್ತು.
ಈಗ ಪಕ್ಷದಲ್ಲಿ ತಂದೆಯ ಬಳಿಕ ತನ್ನ ಕೈಯನ್ನು ಭದ್ರಪಡಿಸಬೇಕು ಎಂಬ ಉತ್ಸಾಹದಲ್ಲಿರುವ ವಿಜಯೇಂದ್ರ ಅವರು ಶೋಭಾರವರು ಯಡಿಯೂರಪ್ಪರೊಂದಿಗೆ ಹೆಚ್ಚು ಸಂಪರ್ಕದಲ್ಲಿರದಂತೆ ನೋಡಿಕೊಳ್ಳುತ್ತಿದ್ದಾರಂತೆ. ಅದೇ ಕಾರಣದಿಂದ ಶೋಭಾ ಅವರು ಈಗ ಪಕ್ಷದ ರಾಜ್ಯ ಸಮಿತಿಯ ಯಾವುದೇ ವ್ಯವಹಾರದಲ್ಲೂ ಕೈಯಾಡಿಸಲು ಸಾಧ್ಯವಾಗುತ್ತಿಲ್ಲವಂತೆ. ಇದು ಪಕ್ಷಕ್ಕೂ ಅನುಕೂಲಕರವಾಗಿಯೇ ಇದೆಯಂತೆ. ಯಡಿಯೂರಪ್ಪ ವಿರುದ್ಧ ಈ ಬಾರಿ ಹೆಚ್ಚು ಅಸಮಾಧಾನ ಮೂಡದಿರಲು ಹಾಗೂ ಅವರಿಂದ ಉತ್ತಮ ಆಡಳಿತ ನಡೆಸುವಂತಾಗಲು ಕೂಡ ಇದುವೇ ಕಾರಣ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *