“ಯಡಿಯೂರಪ್ಪ ಪರ್ಮನೆಂಟ್ ಆಗಿ ಇರ್ತಾನಾ.. ನಂಗೂ ಗೊತ್ತು ಬಿಡಯ್ಯಾ”
ಹಾಸನ: “ನಂಗೆ ಹೇಗೆ ಕೆಲಸ ಮಾಡಿಸ್ಬೇಕು ಅಂತ ಗೊತ್ತು ಬಿಡಯ್ಯಾ, ಯಡಿಯೂರಪ್ಪ ಏನು ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರ್ತಾನಾ?” ಹೀಗೆಂದು ಶಾಸಕ, ಜೆಡಿಎಸ್ ಮುಖಂಡ ರೇವಣ್ಣ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಹಾಸನಕ್ಕೆ ನಿಗದಿಯಾಗಿದ್ದ ತೋಟಗಾರಿಕಾ ಕಾಲೇಜ್ ಅನ್ನು ಸರಕಾರ ರದ್ದು ಪಡಿಸಿರುವುದಕ್ಕೆ ಸಿಡಿಮಿಡಿಗೊಂಡಿರುವ ಎಚ್.ಡಿ.ರೇವಣ್ಣ, ಸಿಎಂ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
“ಯಡಿಯೂರಪ್ಪ ರದ್ದು ಮಾಡಿದರೆ ಏನಾಯಿತು, ನನಗೆ ಹೇಗೆ ಕೆಲಸ ಮಾಡಬೇಕು ಗೊತ್ತು, ನಾನೇನು ಸುಮ್ಮನೆ ಕೂತಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಬದುಕಿದ್ದಾಗಲೇ ಹಾಸನಕ್ಕೆ ಕಾಲೇಜು ತಂದೇ ತರುತ್ತೇನೆ. ಈ ದೇವೇಗೌಡರ ಕುಟುಂಬದ ಬಗ್ಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿರುವ ರೇವಣ್ಣ, “ಕಾಲೇಜು ರದ್ದು ಮಾಡಿದರೆ, ನಾನೇನು ಹೆದರಿಕೊಂಡು ಓಡಿ ಹೋಗಲ್ಲ”ಎಂದಿದ್ದಾರೆ. “ನಾನು ಹೆದರಿಕೊಂಡು ಕೂತಿದ್ದೀನಿ ಎಂದು ಅವನು ಅಂದುಕೊಂಡಿರಬಹುದು. ಆದರೆ, ನನಗೆ ಇದನ್ನೆಲ್ಲಾ ಎದುರಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ” ಎಂದು ಆಕ್ರೋಶ ಹೊರಹಾಕಿದ್ದಾರೆ.