“ಮೋದಿ ಸರಕಾರದ ನೀತಿಗಳು ಬದಲಾಗದೆ ಚೀನಾ ಮಾಲುಗಳ ಒಂದು ಕೂದಲೂ ಉದುರುವುದಿಲ್ಲ”

ಗಡಿಯಲ್ಲಿ ನಡೆದ ಘರ್ಷಣೆ, ಸೈನಿಕರ ಹತ್ಯೆಯ ಹಿನ್ನಲೆಯಲ್ಲಿ “ರಾಷ್ಟ್ರವಾದಿಗಳು” ಎಂದು ತಮ್ಮನ್ನು ತಾವು ಕರೆಸಿಕೊಳ್ಳುವ ಆಡಳಿತ ಪಕ್ಷದ ಬೆಂಬಲಿಗರು ಚೀನಾ ಮೇಡ್ ವಸ್ತುಗಳ ಬಹಿಷ್ಕಾರಕ್ಕೆ ಕರೆ ‌ನೀಡಿದ್ದಾರೆ. ಜೊತೆಗೆ ಯುದ್ದ ವಿರೋಧಿಗಳು, ವಿರೋಧ ಪಕ್ಷಗಳನ್ನು ಮೂದಲಿಸುತ್ತಿದ್ದಾರೆ. ಕಮ್ಯುನಿಸ್ಟರನ್ನಂತೂ ದೇಶ ವಿರೋಧಿಗಳು ಎಂಬಂತೆ ಬಿಂಬಿಸಲು ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ. ಬಲಪಂಥೀಯರ ಈ ಚೈನಾ ಮೇಡ್ ವಸ್ತುಗಳ ಬಹಿಷ್ಕಾರ, ದೇಶಪ್ರೇಮದ ಹುಸಿ ಭಾವುಕತೆ, ಕಮ್ಯುನಿಸ್ಟರ ಮೇಲಿನ ಆಕ್ರೋಶಗಳನ್ನು ಕಂಡಾಗ ಕೆಲವು ವಿಷಯಗಳು ನೆನಪಾಗುತ್ತದೆ.

1990 ರಲ್ಲಿ ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿ, ವಿದೇಶಿ ಕಂಪೆನಿಗಳನ್ನು ರೆಡ್ ಕಾರ್ಪೆಟ್ ಹಾಕಿ ದೇಶದೊಳಗಡೆ ಸ್ವಾಗತಿಸಿದಾಗ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದು, ಸಂಸತ್ ನಲ್ಲಿ ತೀವ್ರ ಪ್ರತಿರೋಧ ಒಡ್ಡಿದ್ದು ಅಂದು ಪ್ರಬಲವಾಗಿದ್ದ ಕಮ್ಯುನಿಸ್ಟ್ ಪಕ್ಷಗಳು ಹಾಗೂ ಅವುಗಳ ಸಾಮೂಹಿಕ ಸಂಘಟನೆಗಳು.‌ ಈ ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದ ಮುಂದೆ ಉಂಟಾಗುವ ಅಪಾಯಗಳು, ದೇಶದ ಆರ್ಥಿಕತೆ, ಮಾರುಕಟ್ಟೆ, ಕೊನೆಗೆ ರಾಜಕಾರಣವೂ ವಿದೇಶಿ ಬ್ಯಾಂಕ್, ಕಂಪೆನಿಗಳ, ಆ ಮೂಲಕ ಬಲಾಢ್ಯ ಸಾಮ್ರಾಜ್ಯಶಾಹಿ ದೇಶಗಳ ನಿಯಂತ್ರಣಕ್ಕೆ ಒಳಗಾಗುವುದನ್ನು ತರ್ಕಬದ್ದವಾಗಿ ಜನರ ಮುಂದಿಟ್ಟಿದ್ದವು. ಆದರೆ ಈ ರಾಷ್ಟ್ರವಾದಿಗಳು ಎಂಬ ಕಿರೀಟಧಾರಿ ಬಲಪಂಥೀಯರು ಅಂದು ಕಮ್ಯುನಿಸ್ಟರ ವಿರೋಧವನ್ಜು ಜಾಗತೀಕರಣದ, ಗ್ಯಾಟ್ ಒಪ್ಪಂದದ ಸಮರ್ಥಕರ ಜೊತೆ ಸೇರಿ ಅಪಹಾಸ್ಯ ಗೈದಿದ್ದರು. ಅಭಿವೃದ್ದಿ ವಿರೋಧಿಗಳು ಎಂದು ಮೂದಲಿಸಿದ್ದೆರು.

ಅಂದು ಕಮ್ಯುನಿಸ್ಟರು ಏನೆಲ್ಲಾ ಅಪಾಯಗಳ ಕುರಿತು ಹೇಳಿದ್ದರೊ, ಅದೆಲ್ಲಾ ಇಂದು ಕಣ್ಣ ಮುಂದೆ ಅನಾವರಣಗೊಳ್ಳುತ್ತಿದೆ. ಒಂದು ಥಮ್ಸ್ ಅಪ್, ಕೊಕೊ ಕೋಲಾ ತಂಪು ಪಾನೀಯಕ್ಕೆ ಪ್ರವೇಶ ಕಷ್ಟ ಇದ್ದ ದೇಶದಲ್ಲಿ ಇಂದು ಭಾರತೀಯ ಬ್ರಾಂಡ್ ಯಾವುದಿದೆ ಎಂದು ದುರ್ಬೀನು ಹಾಕಿ ತಡಕಾಡಬೇಕಿದೆ. ಸ್ನಾನದ ಮನೆಯಿಂದ ಬೆಡ್ ರೂಂ ವರಗೆ ಎಲ್ಲವೂ ವಿದೇಶಿ ಬ್ರಾಂಡ್ ಗಳು ಆವರಿಸಿಕೊಂಡಿವೆ. ಯಾವ ಮಟ್ಟಿಗೆ ಎಲ್ಲವೂ ವಿದೇಶಿಮಯ ಆಗಿದೆ ಅಂದರೆ, ಯಾವುದಾದರೊಂದು ಮುನ್ಸಿಪಾಲಿಟಿ ಚರಂಡಿ, ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೂ ವಿದೇಶಿ ಬ್ಯಾಂಕ್ ಗಳ ಶರತ್ತುಗಳಿಗೆ ಸಹಿ ಹಾಕಿ ಸಾಲ ಪಡೆಯುವಷ್ಟು. ಟೌನ್ ಪಂಚಾಯತ್ ಗಳಿಗೆ, ಮುನ್ಸಿಪಾಲಿಟಿಗಳಿಗೆ ನಾವು ಕಟ್ಟುವ ಮನೆ ತೆರಿಗೆ, ಕಸದ ತೆರಿಗೆ, ನೀರಿನ ದರವನ್ನು ನಿರ್ಧರಿಸುವುದು ಸಹ ವಿದೇಶದಲ್ಲಿರುವ ಸಾಲದಾತ ಬ್ಯಾಂಕುಗಳು. (ಸಾರ್ವಜನಿಕ ನಳ್ಳಿಗಳನ್ನು “ಉಚಿತವಾಗಿ ನೀರು ಕೊಡಬಾರದು” ಎಂಬ ಈ ವಿದೇಶಿ ಬ್ಯಾಂಕುಗಳ ಶರತ್ತಿನ ಪ್ರಕಾರವೇ ತೆಗೆದು ಹಾಕಲಾಯಿತು, ಇಂದು ಯಾವುದಾದರೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ನೀರಿನ ಟ್ಯಾಪ್ ಇದ್ದರೆ ಹುಡುಕಿ ಹೇಳಿ)

ಈ ಮಟ್ಟಿಗೆ ಎಲ್ಲವನ್ನೂ ವಿದೇಶಿ ಹೂಡಿಕೆಗೆ ತೆರೆದುದದರ ಭಾಗವಾಗಿಯೇ ಅಮೆರಿಕಾ, ಜಪಾನ್, ಕೊರಿಯಾದಿಂದ ಹಿಡಿದು ಚೈನಾದವರೆಗಿನ ವಸ್ತುಗಳು ನಮ್ಮ ಮಾರುಕಟ್ಟೆಯನ್ನು ಆಳುತ್ತಿವೆ. ಅವುಗಳಿಂದ ಬಿಡಿಸಿಕೊಳ್ಳಲು ಸಾದ್ಯವಿಲ್ಲ. ಮಾರುಕಟ್ಟೆಯಲ್ಲಿ ಕಾಣುವ ವಸ್ತುಗಳಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಹರಿದಿರುವ ವಿದೇಶಿ ನೇರ ಹೂಡಿಕೆ ಸಾಮಾನ್ಯರ ಊಹೆಗೆ ನಿಲುಕದ್ದು. ಈ ಎಲ್ಲಾ ಹೂಡಿಕೆಗಳು ನಮ್ಮ‌ ದೇಶವನ್ನು ಅಕ್ಷರಶ: ಅದೃಶ್ಯವಾಗಿ ಆಳುತ್ತವೆ‌. ಚೈನಾ ಅಂತ ವಸ್ತುಗಳ ರಫ್ತು, ಹೂಡಿಕೆಯಲ್ಲಿ ಅಗಾಧವಾದ ಪಾಲನ್ನು ಹೊಂದಿದೆ.

1990 ರಲ್ಲಿ ನರಸಿಂಹ ರಾವ್ ಸರಕಾರದಿಂದ ಹಿಡಿದು ಈಗಿನ‌ ಮೋದಿ ಯುಗದವರೆಗೂ ಕಮ್ಯು‌ನಿಸ್ಟರು ಈ ಮುಕ್ತಮಾರುಕಟ್ಟೆ ಎಂಬ ಮಾಯಾಮೃಗದ ಆಟವನ್ನು ಎಲ್ಲಾ ಹಂತದಲ್ಲೂ ಪ್ರಬಲವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದು ಅಮೆರಿಕಾ, ಇರಲಿ ಚೈನಾ ಇರಲಿ ಭಾರತದ ಕಮ್ಯುನಿಸ್ಟರ ಮಟ್ಟಿಗೆ ಯಾವ ವ್ಯತ್ಯಾಸವೂ ಇರಲಿಲ್ಲ. ಆದರೆ, ರಾಷ್ಟ್ರೀಯವಾದಿ, ಸ್ವದೇಶಿ… ಮುಂತಾದ ವಿಶೇಷಣಗಳ ಪೋಷಾಕು ತೊಟ್ಟು ತಿರುಗುತ್ತಿದ್ದ ಆರ್ ಎಸ್ ಎಸ್, ಬಿಜೆಪಿಗರು ವಾಜಪೇಯಿಯ ಸರಕಾರದ ಅವಧಿಯಲ್ಲೂ ವಿದೇಶಿ ಹೂಡಿಕೆಗೆ ನರಸಿಂಹ ರಾವ್ ಸರಕಾರಕ್ಕಿಂತ ಹೆಚ್ಚಿನ ಆಸಕ್ತಿಯಿಂದ ಬೆಂಬಲ ಕೊಟ್ಟಿದ್ದಾರೆ. ಮೋದಿಯುಗದ ಕತೆಯಂತೂ ಕೇಳುವಂತೆಯೇ ಇಲ್ಲ. ಅದು ನೇರಾನೇರ ಖಾಸಗೀಕರಣ, ವಿದೇಶಿ ಹೂಡಿಕೆಯ ಪರ. ಆ ವಿಷಯದಲ್ಲಿ ನರೇಂದ್ರ ಮೋದಿಯವರಿಗೆ ಯಾವ ಹಿಂಜರಿಕೆಯೂ ಇಲ್ಲ. ಈ ಹಿಂದೆ ಕಾಂಗ್ತೆಸ್ ಆಡಳಿತದ ಸಂದರ್ಭ ತಾನು ವಿರೋಧಿಸಿದ ಈ ನೀತಿಗಳನ್ನು ಯಾವ ಮಜುಗರವೂ ಇಲ್ಲದೆ, ಮನಮೋಹನ ಸಿಂಗರೇ ನಾಚಿಕೊಳ್ಳುವಷ್ಟು ವೇಗವಾಗಿ ಜಾರಿಗೊಳಿಸುತ್ತಿದ್ದಾರೆ. ಭಾರತದ ಮಾರುಕಟ್ಟೆಯನ್ನು ಚೀನಾ ಮಾಲುಗಳ ಈ ಪರಿಣಾಮದಲ್ಲಿ ಆವರಿಸಿಕೊಳ್ಳಲು, ಚೀನಾ ಕಂಪೆನಿಗಳ ಹೂಡಿಕೆ ಎಲ್ಲಾ ಕ್ಷೇತ್ರಗಳಲ್ಲಿ ಬೇರಿಳಿಸಿಕೊಳ್ಳಲು ಮೋದಿಯವರ ಸರಕಾರದ ಪ್ರಜ್ಞಾಪೂರ್ವಕ ಒಪ್ಪಂದ, ನೀತಿಗಳೇ ಕಾರಣ.

ಹಾಗಿರುತ್ತಾ, ಹುಸಿ ರಾಷ್ಟ್ರೀಯವಾದಿಗಳು, ಸ್ವದೇಶಿ ಮಂತ್ರ ಜಪಿಸುವ ಬಲಪಂಥೀಯರು (ಇವರೆಲ್ಲರೂ ಬಿಜೆಪಿ, ಆರ್ ಎಸ್ ಎಸ್ ಬೆಂಬಲಿಗರು, ಮೋದಿ ಅನುಯಾಯಿಗಳು) ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ ಕೊಡುವುದರಲ್ಲಿ ಯಾವ ಅರ್ಥವಿದೆ, ಏನು ಪ್ರಯೋಜನ ಇದೆ. ಸಾಧ್ಯವಾದರೆ ಮೋದಿ ಸರಕಾರ ಮುಕ್ತ ಮಾರುಕಟ್ಟೆ, ವಿದೇಶಿ ಹೂಡಿಕೆ ನೀತಿಗಳನ್ನು ನಿಧಾನಕ್ಕೆ ಬದಲಾಯಿಸುವಂತೆ ಒತ್ತಡ ಹೇರಬೇಕು. ಮೋದಿ ಸರಕಾರದ ನೀತಿಗಳು ಬದಲಾಗದೆ ಯಾವ ಅಭಿಯಾನದಿಂದಲೂ ಚೀನಾ ಮಾಲುಗಳ ಒಂದು ಕೂದಲೂ ಉದುರುವುದಿಲ್ಲ. ಹಾಗಾಗ ಬೇಕಾದರೆ ಮೋದಿ ಸರಕಾರದ ವಿರುದ್ದವೆ ಹೋರಾಟ ನಡೆಸಬೇಕು. ಅದಕ್ಕಾಗಿ ಭಾರತದ ಕಮ್ಯುನಿಸ್ಟ್ ಪಕ್ಷಗಳ ಕಾರ್ಯಕ್ರಮ, ನೀತಿಗಳನ್ನು ಅಭ್ಯಾಸ ಮಾಡಬೇಕು, ಅವರ ಹೋರಾಟ, ಘೋಷಣೆಗಳನ್ನು ಅಳವಡಿಸಿಕೊಳ್ಳಬೇಕು.

ತಮಾಷೆ ಅಂದರೆ ಚೈನಾ ಸೇರಿದಂತೆ ವಿದೇಶಿ ಕಂಪೆ‌ನಿಗಳ ದೇಶ ಪ್ರವೇಶದ ವಿರುದ್ದ ದೃಢವಾಗಿರುವ ಕಮ್ಯುನಿಸ್ಟರ, ಕಮ್ಯುನಿಸ್ಟ್ ಪಕ್ಷಗಳ ವಿರುದ್ದ ದ್ವೇಷಕಾರುತ್ತಾ, ಚೀನಾ ಹೂಡಿಕೆಗೆ, ಚೀನಾ ಮಾಲುಗಳ ಪ್ರವೇಶಕ್ಕೆ ರಕ್ತ ಗಂಬಳಿ‌ ಹಾಸಿರುವ ಮೋದಿಯಲ್ಲಿ ವಿಮೋಚಕನನ್ನು ಈ ಉನ್ಮಾದಿತ ಗುಂಪು ಕಾಣುತ್ತಿರುವುದು. ಸಾಧ್ಯ ಆದರೆ ಭಾರತದ ಕಮ್ಯುನಿಸ್ಟ್ ಪಕ್ಷಗಳು ವಿದೇಶಿ ಕಂಪೆನಿಗಳ ಕುರಿತು ಏನು ಹೇಳುತ್ತವೆ,,ಮೋದಿಯವರು ಐದು ಬಾರಿ ಚೀನಾ ಪ್ರವಾಸ ಹೋದಾಗ, ಎರಡು ಸರ್ತಿ ಚೀನಾ ಅಧ್ಯಕ್ಷರನ್ನು ತಬ್ಬಿ ಭಾರತಕ್ಕೆ ಬರ ಮಾಡಿಕೊಂಡಾಗ ಯಾವೆಲ್ಲ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬುದನ್ನು ಓದಿ, ಅರ್ಥ ಮಾಡಿಕೊಂಡು ಕಮ್ಯುನಿಸ್ಟರನ್ನು ಟೀಕಿಸಿ, ಬಾಯ್ಕಾಟ್ ಚೀನಾ ಎಂದು ಮೆರವಣಿಗೆ ನಡೆಸಿ.

📝ಮುನೀರ್ ಕಾಟಿಪಳ್ಳ

Leave a Reply

Your email address will not be published. Required fields are marked *