`ಮೋದಿಯವರೇ, ನಿಮಗೆ ತಾಕತ್ತಿದ್ರೆ ಚೀನಾ ವಸ್ತು ಬ್ಯಾನ್ ಮಾಡಿ’
ಹಾಸನ: `ನಿಮಗೆ ತಾಕತ್ತಿದ್ರೆ ಚೀನಾ ವಸ್ತುಗಳನ್ನು ದೇಶದೊಳಗೆ ನಿರ್ಬಂಧಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಸವಾಲೆಸೆದಿದ್ದಾರೆ. ನೋಟ್ ಬ್ಯಾನ್ ಮಾಡಲು ಮತ್ತು ಕೊರೊನಾ ವಿರುದ್ಧ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲು ಕ್ಷಣದಲ್ಲೇ ನಿರ್ಧಾರ ಕೈಗೊಂಡಿರುವ ನೀವು ಚೀನಾ ವಸ್ತುಗಳಿಗೆ ನಿರ್ಬಂಧ ಹೇರಲು ಯಾಕೆ ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಸುರೇಶ್ ಪ್ರಶ್ನಿಸಿದ್ದಾರೆ.
ಜಿಎಸ್‍ಟಿ ಜಾರಿಗೆ ತರುವಲ್ಲಿ ತಕ್ಷಣವೇ ಕಾನೂನು ರೂಪಿಸಿದ ನೀವು ಚೀನಾ ವಿರುದ್ಧ ದೃಢ ನಿರ್ಧಾರ ಕೈಗೊಳ್ಳುತ್ತಿಲ್ಲ. ಕೊರೊನಾ ವಿರುದ್ಧ ಹೋರಾಟದಲ್ಲಿ ಮೋದಿ 20 ಲಕ್ಷ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು ಇದರಲ್ಲಿ ಎರಡು ಲಕ್ಷ ಕೋಟಿ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಇಲ್ಲಿವರೆಗೆ ಯಾವ ರೈತರ ಖಾತೆಗೆ ಬಿಡಿಗಾಸು ಕೂಡ ಹಾಕಿಲ್ಲ. ಮೋದಿ ಸರ್ಕಾರ ರೈತರಿಗೆ ಚಿಲ್ಲರೆ ಹಣವನ್ನೂ ನೀಡಿಲ್ಲ ಎಂದು ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.