ಮದುವೆ ಮನೆಯಲ್ಲಿ ಸ್ವೀಟ್‍ಗಾಗಿ ಗಲಾಟೆ: ವರನಿಂದ ಬಾಲಕನ ಹತ್ಯೆ!
ಲಕ್ನೋ: ಮದುವೆ ಮನೆಯಲ್ಲಿ ಸಿಹಿತಿಂಡಿಗಾಗಿ ಉಂಟಾದ ಜಗಳ ವರ ತನ್ನ ಬಾಮೈದನನ್ನೇ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಶಮ್ಶಾಬಾದ್ ನಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿ ಸಹಿತ ಇಬ್ಬರು ಮಹಿಳೆಯರಿಗೆ ಕೂಡ ಗಂಭೀರ ಗಾಯಗಳಾಗಿವೆ. ಆರೋಪಿಗಳ ವಿರುದ್ಧ ವಧುವಿನ ತಂದೆ ರಾಂಪಲ್ ಜಾತವ್ ಎಫ್‍ಐಆರ್ ದಾಖಲಿಸಿದ್ದಾರೆ.
ಸೋಮವಾರ ರಾತ್ರಿ ವರ ಮನೋಜ್ ಕುಮಾರ್ ಹಾಗೂ ಆತನ ಇಬ್ಬರು ಸ್ನೇಹಿತರು ವಧುವಿನ ಮನೆಯವರ ಜೊತೆ ಸ್ವೀಟ್ ಗಾಗಿ ಕ್ಯಾತೆ ತೆಗೆದಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಯುವಕರನ್ನು ಸಮಾಧಾನಪಡಿಸಲು ಹಿರಿಯರು ಮಧ್ಯಪ್ರವೇಶ ಮಾಡಿದರು. ಈ ವೇಳೆ ಅವರು ಗುಂಡು ಹಾರಿಸಿದ್ದಾರೆ. ಆದರೆ ಭಾರೀ ಅನಾಹುತದಿಂದ ನನ್ನ ಸೋದರ ಮಾವ ಪಾರಾಗಿದ್ದಾರೆ ಎಂದು ವಧುವಿನ ಸಹೋದರ ಪುನೀತ್ ತಿಳಿಸಿದ್ದಾರೆ. ಅಲ್ಲದೆ ಸಹೋದರ ಪ್ರನ್ಶು, ಮನೋಜ್ ಹಾಗೂ ಆತನ ಗೆಳೆಯರಿಗೆ ನೀರು ಕೊಡುತ್ತಿದ್ದರು. ಈ ವೇಳೆ ಅವರು ಸಿಟ್ಟಿನಿಂದ ಹೊಡೆಯಲು ಮುಂದಾಗಿದ್ದಲ್ಲದೇ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೀಗೆ ಎಸ್ಕೇಪ್ ಆಗಲು ಯತ್ನಿಸುವಾಗ ಅವರನ್ನು ತಡೆಯಲು ಇಬ್ಬರು ಮಹಿಳೆಯರು ಹಾಗೂ ಬಾಲಕಿ ಓಡಿದ್ದು, ಅವರಿಗೂ ಗಂಭೀರ ಗಾಯಗಳಾಗಿವೆ. ಇಷ್ಟೆಲ್ಲ ಆದ ಬಳಿಕ ವಾಪಸ್ ಬರುವಂತೆ ಹಾಗೂ ಪ್ರನ್ಶುವನ್ನು ಕರೆದುಕೊಂಡು ಬರುವಂತೆ ಮನೋಜ್ ಗೆ ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ನಸುಕಿನ ಜಾವ 3 ಗಂಟೆ ಸುಮಾರಿಗೆ ನನ್ನ ಸಹೋದರನ ಮೃತದೇಹವನ್ನು ಗ್ರಾಮದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂದು ಪುನೀತ್ ಬೇಸರ ವ್ಯಕ್ತಪಡಿಸಿದನು. ಪ್ರನ್ಶು ಕುತ್ತಿಗೆ ಹಾಗೂ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದವು. ಇತ್ತ ಗಾಯಗೊಂಡಿರುವ ವಿಮ್ಲಾ(50), ಮಿಥಿಲೇಶ್(35) ಹಾಗೂ ಸಪ್ನಾ(17) ಇವರುಗಳನ್ನು ಲೋಹಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿ ಮಿಥಿಲೇಶ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದ ಜನರನ್ನು ಲೆಕ್ಕಿಸದೆ ಮನೋಜ್ ಕುಮಾರ್ ತುಂಬಾ ಸ್ಪೀಡಾಗಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ ನಮ್ಮ ಸಂಬಂಧಿಕರಾದ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಅಲ್ಲದೆ ನನ್ನ 9 ವರ್ಷದ ಮಗನನ್ನು ಮನೋಜ್ ಕುಮಾರ್ ಹಾಗೂ ಆತನ ಗೆಳೆಯರು ಸೇರಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ಎರಡು ಕಡೆಯ ದೂರುಗಳನ್ನು ಆಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಲ್ ಅಧಿಕಾರಿ ರಾಜ್ ವೀರ್ ಸಿಂಗ್ ಗೌರ್ ಹೇಳಿದ್ದಾರೆ.