ಮತ್ತೊಂದು ಮನಕಲಕುವ ಘಟನೆ… ತುಂಬುಗರ್ಭಿಣಿ ಪತ್ನಿಯನ್ನು ಕೇರಳಕ್ಕೆ ಕಳುಹಿಸಲು ಕೋರ್ಟ್ ಮೆಟ್ಟಿಲೇರಿದ್ದ ಯುವಕ ಇನ್ನಿಲ್ಲ!

ಮಂಗಳೂರು: ಎರಡು ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ತಮ್ಮ 39ನೇ ವಯಸ್ಸಲ್ಲಿ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ್ದರೆ ಇಂದು ನೆರೆಯ ಕೇರಳದಲ್ಲಿ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ. ಭಾರತದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾದಾಗ ವಿದೇಶಗಳಿಂದ ವಿಮಾನ ಸಂಚಾರ ರದ್ದಾದ ವೇಳೆ ದುಬೈಯಲ್ಲಿದ್ದ ಪತ್ನಿ, 7 ತಿಂಗಳ ಗರ್ಭಿಣಿ ಆದಿರಾಳಿಗೆ ಕೇರಳಕ್ಕೆ ಹೋಗಲು ವ್ಯವಸ್ಥೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಲೇರಿ ಅದರಲ್ಲಿ ಯಶಸ್ಸನ್ನೂ ಕಂಡಿದ್ದ ಕೇರಳದ ಪೆರಾಂಬ್ರ ಎಂಬ ಹಳ್ಳಿಯ 28 ವರ್ಷದ ಯುವಕ ನಿಧಿನ್ ಚಂದ್ರನ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಆ ಮೂಲಕ ಈ ಅನಿವಾಸಿ ಭಾರತೀಯ ಯುವ ಮೆಕಾನಿಕಲ್ ಇಂಜಿನಿಯರ್ ಅನಿವಾಸಿ ಭಾರತೀಯರೆಡೆಯಲ್ಲಿ ಗುರುತಿಸುವಂತಾಗಿದ್ದರು.
ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ವಾಪಸ್ ಕರೆತರಲು `ವಂದೇ ಭಾರತ್ ಮಿಷನ್’ ಆರಂಭವಾದಾಗ ಮೊದಲ ವಿಮಾನದಲ್ಲಿ ಕೋಝಿಕ್ಕೋಡ್‍ಗೆ ಆದಿರಾ ಹಾಗೂ ನಿಧಿನ್ ಇಬ್ಬರಿಗೂ ಕೇರಳಕ್ಕೆ ಮರಳಲು ಅವಕಾಶ ಸಿಕ್ಕಿತ್ತು. ಆದರೆ ನಿಧಿನ್ ಮಾತ್ರ ಮೊದಲ ವಿಮಾನವಾದುದರಿಂದ ತನಗಿಂತ ತುರ್ತಾಗಿ ಪ್ರಯಾಣ ಮಾಡಬೇಕಾಗಿರುವವರು ಇರುವುದರಿಂದ ತನಗಿದ್ದ ಅವಕಾಶದಲ್ಲಿ ಇನ್ನೊಬ್ಬರಿಗೆ ತುರ್ತಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟು ತುಂಬು ಗರ್ಭಿಣಿ ಮಡದಿಯನ್ನು ಮಾತ್ರ ಊರಿಗೆ ಕಳುಹಿಸಿ ಕೊಟ್ಟಿದ್ದರು. ಇದೇ ವೇಳೆ ಇನ್ನಿಬ್ಬರು ಊರಿಗೆ ಮರಳಲು ಸ್ವಂತ ಖರ್ಚಿನಲ್ಲಿ ಟಿಕೆಟ್ ಖರೀದಿಸಿ ನಿಧಿನ್ ಸಹಕರಿಸಿದ್ದರು.
ಸಾಮಾಜಿಕ ಚಟುವಟಿಕೆಗಲ್ಲಿ ಮುಂಚೂಣಿಯಲ್ಲಿದ್ದ ನಿಧಿನ್ ಬ್ಲಡ್ ಡೋನರ್ಸ್ ಕೇರಳ ಇದರ ದುಬೈ ಪ್ರತಿನಿಧಿಯಾಗಿ ರಕ್ತದಾನ ಮತ್ತಿತರ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ತುಂಬು ಗರ್ಭಿಣಿಯಾಗಿ ಹೆರಿಗೆಗೆ ಕೆಲವೇ ತಿಂಗಳಿರುವ ಪತ್ನಿ ಆದಿರಾರಿಗೆ ಸದ್ಯ ನಿಧಿನ್ ಸಾವಿನ ಸುದ್ದಿಯನ್ನು ಮನೆಮಂದಿ ತಿಳಿಸಿಲ್ಲ. ಅವರನ್ನು ಮುಂಜಾಗ್ರತೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ನಿಧಿನ್ ಸಾವು ಕೇರಳದಾದ್ಯಂತ ಜನರ ಮನಕಲಕಿದೆ.

Leave a Reply

Your email address will not be published. Required fields are marked *