ಮತ್ತೆ ಜಿಂದಾಲ್ ನ 46 ಕಾರ್ಮಿಕರಿಗೆ ಕೊರೊನಾ!

ಬಳ್ಳಾರಿ: ಇಂದು ಮತ್ತೆ ಜಿಂದಾಲ್ ಕಂಪೆನಿಯ 46 ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಇದರೊಂದಿಗೆ ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ ಆಗಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 33 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದರೂ ಜಿಂದಾಲ್ ಬಾಗಿಲು ಮುಚ್ಚಿರಲಿಲ್ಲ. ಜಿಂದಾಲ್ ಕಂಪೆನಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಸ್ಥಳೀಯ ಜನಪ್ರತಿನಿಧಿಗಳು ಆಗ್ರಹಿಸಿದ್ದರು. ಕಳೆದೊಂದು ವಾರದಿಂದ ಜಿಂದಾಲ್ ನಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದ್ದು, ಜಿಂದಾಲ್ ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ಅವರು ಜಿಂದಾಲ್ ಓಪಿಜಿ ಸೆಂಟರ್ ಅನ್ನು ಅನಿರ್ದಿಷ್ಟ ಕಾಲ ಮುಚ್ಚುವಂತೆ ಆದೇಶಿಸಿದ್ದಾರೆ. ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುವ ಮುನ್ಸೂಚನೆಯಿದೆ ಎನ್ನಲಾಗಿದೆ. ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಓಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ನೀಡುವುದರ ಜೊತೆಗೆ ಎಲ್ಲ ಸಿಬ್ಬಂದಿ ಹೋಂ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *