ಮಂಗಳೂರು ಮಾದರಿ ಘಟನೆ! ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರಕ್ಕೆ ಕೊಪ್ಪಳ ಗ್ರಾಮಸ್ಥರ ತಡೆ!!
ಕೊಪ್ಪಳ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನು ಗ್ರಾಮದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ಸ್ಥಳೀಯರು ತಡೆಹಿಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ 50 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು. ಸಂಬಂಧಿಕರು ಗ್ರಾಮದ ಸ್ಮಶಾನದಲ್ಲಿ ಮೃತದೇಹವನ್ನು ಹೂಳಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸ್ಮಶಾನ ಬಿಟ್ಟು ಬೇರೆ ಸರ್ಕಾರಿ ಜಾಗದಲ್ಲಿ ಹೂಳುವಂತೆ ಜನರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೃತ ವೃದ್ಧೆಯ ಮಗ ಬಳ್ಳಾರಿಯ ಜಿಂದಾಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಆತನಿಂದಲೇ ವೃದ್ಧೆಗೆ ಸೋಂಕು ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಂಥದ್ದೇ ಘಟನೆಯೊಂದು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿತ್ತು. ಕೊರೊನಾ ಸೋಂಕಿತೆಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜನರು ವಿರೋಧ ವ್ಯಕ್ತಪಡಿಸಿದ್ದರು.
