ಮಂಗಳೂರು: ಪೋಸ್ಟ್ ಮ್ಯಾನ್ ಮೇಲೆ ರಾಡ್ ನಿಂದ ಹಲ್ಲೆ! ಪೊಲೀಸರ ಎದುರಲ್ಲೇ ರಾಡ್ ಹಿಡಿದು ಯುವಕನ “ಗೂಂಡಾಗಿರಿ”!!

ಮಂಗಳೂರು: ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮೇಲೆ ಯುವಕನೊಬ್ಬ ರಾಡ್ ನಿಂದ ಹಲ್ಲೆ ನಡೆಸಿದ್ದಲ್ಲದೆ ಸ್ಥಳಕ್ಕೆ ತೆರಳಿದ ಪೊಲೀಸರ ಎದುರಲ್ಲೇ ಪೋಸ್ಟ್ ಮ್ಯಾನ್ ಬೈಕ್ ಪುಡಿಗಟ್ಟಿ ಪೋಸ್ಟ್ ಕಾಗದಗಳನ್ನು ಎಸೆದು ಗೂಂಡಾಗಿರಿ ಪ್ರದರ್ಶಿಸಿದ ಘಟನೆ ಮಠದಕಣಿ ಬಳಿ ನಡೆದಿದೆ. ಘಟನೆಯಲ್ಲಿ ಕೋಟೆಕಾರ್ ನಿವಾಸಿ ದಿನೇಶ್(49) ಗಾಯಗೊಂಡಿದ್ದು ಮನೀಶ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ.
ಘಟನೆ ವಿವರ:
ದಿನೇಶ್ ಕಳೆದ 19 ವರ್ಷಗಳಿಂದ ಅಶೋಕನಗರ ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಆಗಿದ್ದು ನಿನ್ನೆ ಎಂದಿನಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ. ಮಠದಕಣಿ ನಿವಾಸಿ ಮನೀಶ್ ಗೆ ರಿಜಿಸ್ಟರ್ ಕಾಗದ ಬಂದಿದ್ದು ಅದನ್ನು ಕೊಡಲು ಹೋದಾಗ ಕೆಟ್ಟ ಭಾಷೆ ಪ್ರಯೋಗಿಸಿ ಬೈದಿದ್ದಲ್ಲದೆ ರಾಡ್ ಹಿಡಿದು ಹೊರಬಂದು ಏಕಾಏಕಿ ಹಲ್ಲೆ ಮಾಡಿದ್ದಾನೆ.
ಪೋಸ್ಟ್ ಮ್ಯಾನ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು ಆರೋಪಿ ಅವರ ಬೈಕ್ ಪುಡಿಗಟ್ಟಿದ್ದಾನೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿದರೂ ಕೇರ್ ಮಾಡದೇ ರಾಡ್ ಹಿಡಿದು ಬೆದರಿಸಿದ್ದಾನೆ ಎನ್ನಲಾಗಿದೆ. ಪೋಸ್ಟ್ ಕಾಗದ ಪತ್ರಗಳನ್ನು ಎಸೆದಿದ್ದು ತಮಗೆ 35,000 ರೂ. ನಷ್ಟ ಉಂಟಾಗಿದೆ ಎಂದು ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *