ಭಾರೀ ಮಳೆಯ ಅಬ್ಬರ ಹಿನ್ನೆಲೆ: ಸಂತ್ರಸ್ತರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರ

ಕಾರವಾರ: ಉತ್ತರ ಕನ್ನಡದಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯಲ್ಲಿ ಸುರಿದ ಭಾರೀ ವರ್ಷಧಾರೆ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ 80ಕ್ಕೂ ಹೆಚ್ಚು ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಜೂನ್ 15 ರಿಂದ ಜುಲೈ 31ರ ವರೆಗೆ 47 ದಿನಗಳ ಕಾಲ ಮೀನುಗಾರಿಕೆಯನ್ನು ಬಂದ್ ಮಾಡಲು ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಸೂಚನೆ ನೀಡಿದೆ.
ನಿಸರ್ಗ ಚಂಡಮಾರುತದ ಅಬ್ಬರ ಇಳಿಕೆಯಾಗುತ್ತಿದ್ದಂತೆ ಮುಂಗಾರು ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಾಂತ ವ್ಯಾಪಕ ಮಳೆ ಸುರಿಯುತ್ತಿದೆ. ಜಿಲ್ಲೆಯ ಅಂಕೋಲ ತಾಲೂಕಿನ ನದಿಭಾಗ ಸಮುದ್ರ ತೀರದ ಬಳಿ ಅಘನಾಶಿನಿ ನದಿ ನೀರು ಹೆಚ್ಚು ಹರಿಯುತ್ತಿದೆ. ಪರಿಣಾಮ 40 ಮನೆಗಳಿಗೆ ನೀರು ನುಗ್ಗಿದ್ದು, 80ಕ್ಕೂ ಹೆಚ್ವು ಜನರನ್ನು ನದಿಭಾಗ ಪ್ರದೇಶದಿಂದ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಭಾಗದ ಪ್ರದೇಶದ ಬಳಿ ಒಡ್ಡು ಕಟ್ಟಿದ್ದರಿಂದ ನದಿಯ ನೀರು ಹೆಚ್ಚು ಶೇಖರಣೆಗೊಂಡಿತ್ತು. ಇದರಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ತಕ್ಷಣ ಒಡ್ಡು ಒಡೆದು ಸಮುದ್ರಕ್ಕೆ ನೀರು ಹೋಗಲು ಅವಕಾಶ ಮಾಡಿಕೊಟ್ಟಿದ್ದು, ಪ್ರವಾಹದ ಪ್ರಮಾಣ ಇಳಿಕೆಯಾಗುತ್ತಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಬಿಡುವು ಕೊಟ್ಟಿದ್ದ ಮಳೆ ಶುಕ್ರವಾರದಿಂದ ವ್ಯಾಪಕ ಗಾಳಿ ಸಹಿತ ಮಳೆಯಾಗುತ್ತಿದೆ. ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹೆಚ್ಚಿನ ಮಳೆಯಾಗುತ್ತಿದೆ. ಇನ್ನೂ ಒಂದು ವಾರಗಳ ಕಾಲ ಹೆಚ್ಚಿನ ಮಳೆಯಾಗಲಿದೆ.

Leave a Reply

Your email address will not be published. Required fields are marked *