ಭಾರತ ಪ್ರವೇಶದ ನಿರೀಕ್ಷೆಯಲ್ಲಿ ಪಿಸಿಬಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಸದ್ಯ ಹೊಸ ಮನವಿಯೊಂದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ಸಲ್ಲಿಸಿದೆ. ಮುಂದೆ ಭಾರತ ಐಸಿಸಿ ವಿಶ್ವಕಪ್‍ನ ಎರಡು ಟೂರ್ನಿಗಳಿಗೆ ಆತಿಥ್ಯ ವಹಿಸಲಿದ್ದು, ಇದೇ ಕಾರಣಕ್ಕಾಗಿ ಭಾರತಕ್ಕೆ ಬರಲು ಪಾಕ್‍ಗೆ ಅವಕಾಶ ಸಿಗಲಿದೆಯೇ ಎಂದು ಸದ್ಯ ಐಸಿಸಿ ಬಳಿ ಪಿಸಿಬಿ ಮನವಿ ಸಲ್ಲಿಸಿದೆ. 2021ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ಕ್ರಿಕೆಟ್ ಟೂರ್ನಿಗೆ ಭಾರತ ಅತಿಥ್ಯ ವಹಿಸಲಿದೆ.
ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಲು ಪಾಕಿಸ್ತಾನ ಆಟಗಾರರಿಗೆ ಭಾರತಕ್ಕೆ ಪ್ರವೇಶ ನೀಡುವುದಾಗಿ ಬಿಸಿಸಿಐ ಲಿಖಿತ ಪೂರ್ವಕವಾಗಿ ಭರವಸೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ. ಈ ಕುರಿತು ಮಾತನಾಡಿರುವ ಪಿಸಿಬಿ ಸಿಇಒ ವಸೀಂ ಖಾನ್, 2021, 2023ರ ವಿಶ್ವಕಪ್ ಟೂರ್ನಿಗಳಿಗೆ ಭಾರತ ಅತಿಥ್ಯ ವಹಿಸಲಿದೆ. ಈ ಎರಡು ಟೂರ್ನಿಗಳಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಬಿಸಿಸಿಐನಿಂದ ಲಿಖಿತ ಭರವಸೆಯನ್ನು ಕೊಡಿಸುವಂತೆ ಐಸಿಸಿಗೆ ಮನವಿ ಮಾಡಿದ್ದೇವೆ. ಮುಖ್ಯವಾಗಿ ವೀಸಾ ಕುರಿತ ಎಲ್ಲಾ ಕ್ಲಿಯರೆನ್ಸ್ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಎರಡು ದೇಶಗಳ ಕ್ರಿಕೆಟ್ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ.

Leave a Reply

Your email address will not be published. Required fields are marked *