ಭಾನುವಾರದಿಂದ ಕಟೀಲು ದೇವಸ್ಥಾನ ಓಪನ್, ಇ-ಟಿಕೆಟ್ ಪಡೆದು ದರ್ಶನ!
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೂನ್ 14ರ ಭಾನುವಾರದಿಂದ ಭಕ್ತರಿಗೆ ಪ್ರವೇಶ ನೀಡಲಾಗುತ್ತಿದೆ. ಭಕ್ತರು ದೇವಸ್ಥಾನದ ವೆಬ್ಸೈಟ್ನಿಂದ ಉಚಿತವಾಗಿ ಇ-ಟಿಕೆಟ್ ಅನ್ನು ಮೊದಲೇ ಕಾದಿರಿಸಬೇಕಾಗುತ್ತದೆ. ದೇವರ ದರ್ಶನಕ್ಕೆ ಇ-ಟಿಕೆಟ್ ವ್ಯವಸ್ಥೆ ಕಲ್ಪಿಸಿರುವುದು ರಾಜ್ಯದಲ್ಲೇ ಮೊದಲು ಎನ್ನಲಾಗುತ್ತಿದೆ. ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕಾಗಿದ್ದು ಕ್ಷೇತ್ರದಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಜೂನ್ 8ರಂದು ಕಟೀಲು ದೇವಸ್ಥಾನ ಭಕ್ತರಿಗೆ ತೆರೆದಿರಲಿಲ್ಲ.
ಜೂ.14ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಬಾಕ್ಸ್ ಹಾಕಲಾಗಿದೆ. ಇ-ಪಾಸ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗಿದ್ದು ಪ್ರಾಯೋಗಿಕವಾಗಿಯೂ ನೋಡಲಾಗಿದೆ. ಭಕ್ತರು ವೆಬ್ ಸೈಟ್ ಮೂಲಕ ನೋಂದಾಯಿಸಿ ದೇಗುಲಕ್ಕೆ ಬರಬಹುದಾಗಿದೆ. ಪ್ರತಿ ಹದಿನೈದು ನಿಮಿಷಕ್ಕೆ ಅರವತ್ತು ಮಂದಿಯಷ್ಟು ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 7.30ರಿಂದ ಸಂಜೆ 7.30 ರತನಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯರಿಗೆ ಇ-ಪಾಸ್ ಇಲ್ಲದೆ ದೇಗುಲಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು ಬೆಳಗ್ಗೆ 6 ಗಂಟೆಯಿಂದ ಸಂಜೆ 7.30 ರವರೆಗಿನ ಸಮಯ ನಿಗದಿಪಡಿಸಲಾಗಿದ್ದು ಥರ್ಮಲ್ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳಬಿಡಲಾಗುತ್ತದೆ. ಆದರೆ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ ಎಂದು ದೇಗುಲದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.