ಭಯ ಬೇಡ ಸ್ವಯಂ ರಕ್ಷಣೆ ಸಾಕು, `ಕೊರೊನಾ’ ನಮ್ಮನ್ನು ಸೋಲಿಸದು!

ಮಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ದೇಶದೆಲ್ಲೆಡೆ ಲಾಕ್ ಡೌನ್ ಬಳಿಕ ಸದ್ಯ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಇದರಿಂದ ಹಂತಹಂತವಾಗಿ ದೇಶದಲ್ಲಿ ವ್ಯಾಪಾರ, ವಹಿವಾಟು ಆರಂಭಗೊಂಡಿದ್ದು ಜನರು ಭಯದ ಮಧ್ಯೆಯೇ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಮುಚ್ಚಲ್ಪಟ್ಟಿದ್ದ ಅಂಗಡಿ ಬಾಗಿಲುಗಳು ತೆರೆದುಕೊಂಡಿವೆ, ಗೂಡಂಗಡಿಯಿಂದ ಹಿಡಿದು ಶಾಪಿಂಗ್ ಮಾಲ್ ತನಕ ಗ್ರಾಹಕರಿಗಾಗಿ ಕಾಯುತ್ತಿವೆ. ಆದರೆ ಜೀವನ ನಿರ್ವಹಣೆಗೆ ಶುರು ಮಾಡಿದ್ದ ವ್ಯಾಪಾರಕ್ಕೆ ಗ್ರಾಹಕರು ಬರದೇ ಇದ್ದರೆ? ಇಂದು ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶ, ಹಳ್ಳಿಗಾಡಿನಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ಹೋಟೆಲ್ ತೆರೆದರೂ ಗ್ರಾಹಕರಿಲ್ಲ, ಬಟ್ಡೆಯಂಗಡಿಗೆ ಕಾಲಿಡುವವರಿಲ್ಲ. ಇದರಿಂದ ಅದೆಷ್ಟೋ ಮಂದಿ ವ್ಯಾಪಾರಿಗಳು ಸಂಸಾರ ನಿರ್ವಹಣೆ ಮಾಡಲಾಗದೆ ದಿಕ್ಕೆಟ್ಟು ಕೂತಿದ್ದಾರೆ. ಕೆಲವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಕಳೆದೆರಡು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರು ಬರೋಬ್ಬರಿ 5 ಮಂದಿ.

ಕೊರೊನಾ ವೈರಸ್ ಬೇರೆಲ್ಲ ವೈರಸ್ ಗಳಿಗಿಂತ ವೇಗವಾಗಿ ಹರಡುತ್ತದೆ ಮತ್ತು ಮನುಷ್ಯನ ದೇಹದಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಂತ ತೀಕ್ಷ್ಣ ಪರಿಣಾಮವನ್ನು ಬೀರುತ್ತೆ ಎಂಬ ಕಾರಣ ಭಯ ಸಹಜವಾದುದೇ. ಆದರೆ ಭಯಪಟ್ಟು ಎಷ್ಟು ಸಮಯ ಮನೆಯಲ್ಲಿರಬಹುದು? ಕೊರೊನಾ ವೈರಸ್ ಹೀಗೆ ಬಂದು ಹಾಗೇ ಹೋಗುವಂಥದ್ದಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿರುವಂತೆ ಅದರ ಪ್ರಭಾವ ಅನೇಕ ಕಾಲ ಹಾಗೇ ಇರಬಹುದು. ಹಾಗೆಂದು ಕೊರೊನಾ ವೈರಸ್ ಹರಡುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಮನೆಯಲ್ಲೇ ಉಳಿದುಬಿಟ್ಟರೆ ದೇಶದ ಆರ್ಥಿಕ ಸ್ಥಿತಿ ಕುಸಿಯುವುದಲ್ಲದೆ ಸ್ವಯಂ ಆರ್ಥಿಕ ನಷ್ಟಕ್ಕೆ ತುತ್ತಾಗಬಹುದು. ವ್ಯಾಪಾರ, ವ್ಯವಹಾರಗಳು ಗ್ರಾಹಕರನ್ನೇ ಅವಲಂಬಿಸಿದ್ದು ಜನರು ಭಯಪಟ್ಟು ಮನೆಯಿಂದ ಹೊರಗೆ ಕಾಲಿಡದೇ ಹೋದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾದೀತು.
ಕೊರೊನಾ ವೈರಸ್ ಅಪಾಯಕಾರಿಯೇ ಹೌದು. ಅದಕ್ಕೆ ಸೂಕ್ತ ಔಷಧಿ ಇಲ್ಲವಾದರೂ ಅದರ ವಿರುದ್ಧ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಸಾವನ್ನು ಗೆಲ್ಲಬಹುದು. ನಮ್ಮ ಸುರಕ್ಷತೆಗೆ ಏನೇನು ಮಾಡಿಕೊಳ್ಳಬೇಕೋ ಅದೆಲ್ಲವನ್ನೂ ಮಾಡಿದರೆ ಕೊರೊನಾ ಬಿಡಿ, ಅದಕ್ಕಿಂತ ಭೀಕರ ವೈರಸ್ ಖಾಯಿಲೆ ಬಂದರೂ ನಮ್ಮನ್ನೇನೂ ಮಾಡಲಾಗದು. ಹೊರಗಡೆ ಹೋಗುವಾಗ ಮಾಸ್ಕ್ ಬಳಕೆ, ಜನರ ಗುಂಪಿಗೆ ಹೋಗದಿರುವುದು, ಅಂಗಡಿ, ಮಳಿಗೆ, ರೆಸ್ಟೋರೆಂಟ್‍ಗಳನ್ನು ಸ್ಯಾನಿಟೈಸರ್ ಬಳಕೆ, ಮನೆಗೆ ಬಂದ ಕೂಡಲೇ ಚೆನ್ನಾಗಿ ಕೈತೊಳೆಯುವುದು ಇವೇ ಮುಂತಾದ ಕನಿಷ್ಟ ಸುರಕ್ಷಾಕ್ರಮಗಳನ್ನು ಜೀವನದುದ್ದಕ್ಕೂ ಅನುಸರಿಸುತ್ತಾ ಬಂದ್ರೆ ಕೊರೊನಾ ಒಂದು ದಿನ ಮಾಯವಾಗೇ ಆಗುತ್ತದೆ.
ಹೊರರಾಜ್ಯಗಳಿಂದ ಹೆಚ್ಚುತ್ತಿರುವ ಪ್ರಕರಣ, ಹೊಸ ಪ್ರಕರಣಗಳ ಅಪಾಯವಿಲ್ಲ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಿಂದಾಗಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಯಿತು. ಕೆಲವು ಮಂದಿ ಸಾವಿಗೀಡಾದರು. ಆದರೆ ನಂತರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ನಿಂದಾಗಿ ಕೊರೊನಾ ವ್ಯಾಪಿಸುವುದು ನಿಂತಿತು. ಈಗೇನಿದ್ದರೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು ಮಹಾರಾಷ್ಟ್ರ, ಗುಜರಾತ್ ಮತ್ತಿತರ ಹೊರರಾಜ್ಯಗಳಿಂದ ಬಂದುದಾಗಿದೆ. ಹೊರರಾಜ್ಯದವರನ್ನು ಪ್ರಾರಂಭದಲ್ಲೇ ಕ್ವಾರಂಟೈನ್ ಮಾಡುತ್ತಿರುವ ಕಾರಣ ಅಲ್ಲಿಂದಲೇ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಇದರಿಂದ ಹೊರಗಡೆ ಸೋಂಕು ಹರಡುವ ಭಯವಿಲ್ಲ, ಎಲ್ಲೋ ಒಂದೆರಡು ಹೊಸ ಪ್ರಕರಣಗಳು ವರದಿಯಾಗಿದ್ದರೂ ಸದ್ಯ ಅವರ ವಾಸಸ್ಥಳವನ್ನು ಸೀಲ್ ಡೌನ್ ಮಾಡುವ ಮೂಲಕ ಜನರಲ್ಲಿ ಭಯ ನಿವಾರಿಸಲಾಗಿದೆ. ಕೊರೊನಾಕ್ಕೆ ಭಯಪಟ್ಟುಕೊಂಡು ಮನೆಯಲ್ಲಿದ್ದರೆ ತಿಂಗಳು, ವರ್ಷ ಹಾಗೇ ಕಳೆದುಹೋಗಬಹುದು. ಕೊರೊನಾ ಸೋಲಿಸುವ ಪಣತೊಟ್ಟು ಸುರಕ್ಷಿತವಾಗಿರೋಣ.

Leave a Reply

Your email address will not be published. Required fields are marked *