ಬೈಕ್ ನಿಲ್ಲಿಸಿ `ನೇತ್ರಾವತಿ’ಗೆ ಹಾರಿದ ಯುವಕ ನಾಪತ್ತೆ!

ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ 28ರ ಹರೆಯದ ಯುವಕ ನದಿಗೆ ಹಾರಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೈಕ್ ಸೇತುವೆ ಮೇಲೆ ಪತ್ತೆಯಾಗಿದ್ದು ಆತನಿಗಾಗಿ ಅಗ್ನಿಶಾಮಕದಳ, ಮುಳುಗುತಜ್ಞರು ಶೋಧಕಾರ್ಯ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ 7.30 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ನದಿಗೆ ಹಾರಿದ ವ್ಯಕ್ತಿಯನ್ನು ಮುಡಿಪು ಸಮೀಪದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ(28) ಎಂದು ಗುರುತಿಸಲಾಗಿದೆ. ಎಸ್.ಎಲ್.ಆರ್. ಲಿಮಿಟೆಡ್ ಕಂಪೆನಿಯ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಅವರು ಸ್ನೇಹಿತರ ಬಳಿ ಈ ವಿಚಾರ ತಿಳಿಸಿದ್ದರು ಎನ್ನಲಾಗುತ್ತಿದೆ. ಆದರೆ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
