ಬೀದಿಪಾಲಾಗಿದ್ದ ಬಡರೋಗಿಗಳನ್ನು ಇಎಸ್ಐ ಆಸ್ಪತ್ರೆಗೆ ದಾಖಲಿಸಿದ ಮನಪಾ ಅಧಿಕಾರಿಗಳು!

ಮಂಗಳೂರು: ಜಿಲ್ಲಾಸ್ಪತ್ರೆ ವೆನ್ಲಾಕ್ ಅನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದ ಬಳಿಕ ಸರಕಾರಿ ಆಸ್ಪತ್ರೆಯನ್ನೇ ನಂಬಿದ್ದ ಬಡರೋಗಿಗಳು ದಿಕ್ಕು ತೋಚದಂತಾಗಿದ್ದಾರೆ. ಹೀಗೆ ಜಿಲ್ಲಾಡಳಿತ ಇಲ್ಲಿಂದ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದ ನಾಲ್ವರು ಬಡ ರೋಗಿಗಳನ್ನು ಆಸ್ಪತ್ರೆ ಆಂಬುಲೆನ್ಸ್ ನಲ್ಲಿ ತಂದು ಕಂಕನಾಡಿ ಮಾರ್ಕೆಟ್ ಬಳಿ ಬಿಟ್ಟುಹೋಗುವ ಮೂಲಕ ಅಮಾನವೀಯತೆ ಪ್ರದರ್ಶಿಸಿತ್ತು. ಈ ಬಗ್ಗೆ `ಜಯಕಿರಣ’ ಸಚಿತ್ರ ವರದಿ ಪ್ರಕಟಿಸಿದ್ದು ಕೊನೆಗೂ ಎಚ್ಚೆತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಸಂಜೆ ರೋಗಿಗಳನ್ನು ಇಎಸ್‍ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಅವರು ಆಸ್ಪತ್ರೆಯ ಕ್ರೌರ್ಯಕ್ಕೆ ಬೀದಿಪಾಲಾಗಿದ್ದ ರೋಗಿಗಳು. ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಿತ್ತು. ಮೂರು ತಿಂಗಳಿಗೂ ಅಧಿಕ ಸಮಯ ಕಣಚೂರು ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆಯಿರೋ ರೋಗಿಗಳು ಇವರಾಗಿದ್ದಾರೆ. ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಬೀದಿಗೆ ಬಿಟ್ಟ ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಮಳೆ, ಚಳಿಯ ಮಧ್ಯೆ ಬಡರೋಗಿಗಳು ಮಾರುಕಟ್ಟೆ ಜಗಲಿಯಲ್ಲಿ ಕೂತಿದ್ದು ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಊಟ, ನೀರಿನ ವ್ಯವಸ್ಥೆ ಮಾಡಿ ಸಹಕರಿಸಿದ್ದರು. ತುಫೈಲ್ ಅಹ್ಮದ್ ಎಂಬವರು ಬೆಡ್‍ಶೀಟ್ ಮತ್ತು ಹೊದಿಕೆಯ ವ್ಯವಸ್ಥೆ ಕಲ್ಪಿಸಿದ್ದರು.

Leave a Reply

Your email address will not be published. Required fields are marked *