ಬಾರಲ್ಲಿ ಮದ್ಯವೂ ಇದೆ, ಪಾರ್ಸೆಲ್ಲೂ ಸಿಗುತ್ತೆ.. ಆದರೆ ಕುಳಿತುಕೊಳ್ಳುವಂತಿಲ್ಲ! ಸರಕಾರದ ಲಾಕ್ ಡೌನ್ ನಿಯಮ ಬಾರ್ ಮಾಲಕರಿಗೆ ಮಾತ್ರವೇ?

ಮಂಗಳೂರು: ದೇಶಾದ್ಯಂತ ಕೊರೊನಾ ಲಾಕ್ ಡೌನ್ ಬಹುತೇಕ ಮುಗಿದಿದೆ ಅನ್ನಬಹುದು. ಯಾಕೆಂದರೆ ಲಾಕ್ ಡೌನ್ ಸಡಿಲ ನಿಯಮಗಳು ಸರಿಯಾಗಿ ಪಾಲನೆಯಾಗುವುದು ಎಲ್ಲೂ ಕಂಡುಬರುತ್ತಿಲ್ಲ. ಬಸ್ಸಲ್ಲಿ ಒಂದು ಸೀಟಲ್ಲಿ ಒಬ್ಬರೇ ಪ್ರಯಾಣಿಸಬೇಕು, ಆದರೆ ನಗರದ ಕೆಲ ಬಸ್ಸುಗಳಲ್ಲಿ ಪ್ರಯಾಣಿಕರು ಪೀಕ್ ಹವರ್ ನಲ್ಲಿ ಅಕ್ಕಪಕ್ಕ ಕೂತು ಸಂಚರಿಸುತ್ತಾರೆ, ಇನ್ನೂ ರೈಲಲ್ಲೂ ಅಷ್ಟೇ ಸಾಮಾಜಿಕ ಅಂತರ ಕಾಪಾಡೋದು ಹೇಗೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ಅಷ್ಟೇ ಒಂದೇ ಟೇಬಲ್ ನಲ್ಲಿ ಎಲ್ಲರೂ ಕೂತು ಆಹಾರ ಸೇವಿಸುತ್ತಾರೆ. ಆದರೆ ಸರಕಾರ ಬಾರ್ ತೆರೆಯುವ ಬಗ್ಗೆ ಜಾರಿಗೊಳಿಸಿದ ನಿಯಮಾವಳಿಯಲ್ಲೇ ಗೊಂದಲವಿದ್ದು ಬಾರ್ ಮಾಲಕರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಬಾರ್ ಗಳಲ್ಲಿ ವೈನ್ ಶಾಪ್ ಗಳಂತೆ ಮದ್ಯವನ್ನು ಪಾರ್ಸೆಲ್ ನೀಡಬಹುದು, ಆಹಾರ ಪದಾರ್ಥವನ್ನೂ ಕೂಡಾ ಪಾರ್ಸೆಲ್ ಕೊಡಬಹುದು. ಹಾಗೇ ಬಾರ್ ಒಳಗಡೆ ಕೂತು ಊಟವನ್ನೂ ಮಾಡಬಹುದು, ಆದರೆ ಮದ್ಯ ಸೇವನೆ ಮಾಡುವಂತಿಲ್ಲ ಎಂದು ಸರಕಾರ ಸುತ್ತೋಲೆಯಲ್ಲಿ ಹೇಳಿದೆ. ಬಾರ್ ನಲ್ಲಿ ಮದ್ಯ, ಆಹಾರ ಪಡೆಯಬಹುದಾದರೆ ಒಳಗಡೆ ಕೂತು ಮದ್ಯ ಯಾಕೆ ಸೇವಿಸಬಾರದು ಅನ್ನೋದು ಗ್ರಾಹಕರ ಪ್ರಶ್ನೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಿಗೆ ಆಹಾರ ಸೇವಿಸಲು ಬರುವ ಗ್ರಾಹಕರು ಮದ್ಯ ಪಾರ್ಸೆಲ್ ಪಡೆದು ಗ್ಲಾಸ್ ಕೊಡಿ ಎಂದು ಅಲ್ಲೇ ಆಹಾರದ ಜೊತೆ ಮದ್ಯ ಸೇವಿಸುತ್ತಾರೆ. ಇವರನ್ನು ತಡೆಯುವುದು ಹೇಗೆ? ಒಂದೊಮ್ಮೆ ತಡೆದರೆ ನಷ್ಟದಲ್ಲೇ ನಡೆಯುತ್ತಿರುವ ವ್ಯಾಪಾರಕ್ಕೂ ಕುತ್ತು. ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ವೀಕೆಂಡ್ ನಲ್ಲಿ ಕಿಕ್ಕಿರಿದು ನೆರೆಯುತ್ತಾರೆ. ಜೊತೆಯಲ್ಲೇ ಕೂತು ಆಹಾರ ಸೇವಿಸುತ್ತಾರೆ. ಇದಕ್ಕೆ ಸರಕಾರ `ಅಸ್ತು’ ಅಂದಿರುವಾಗ ಬಾರ್ ನಲ್ಲಿ ಯಾಕೆ ಕೂರುವಂತಿಲ್ಲ? ಬಾರ್ ನಲ್ಲಿ ಆಹಾರ ಸೇವಿಸುವುದಕ್ಕೂ, ರೆಸ್ಟೋರೆಂಟ್ ನಲ್ಲಿ ಫ್ಯಾಮಿಲಿ ಸಮೇತ ಆಹಾರ ಸ್ವೀಕರಿಸುವುದಕ್ಕೂ ಏನು ವ್ಯತ್ಯಾಸವಿದೆ ಎಂದು ಬಾರ್ ಮಾಲಕರು ಸರಕಾರವನ್ನು ಕೇಳುತ್ತಿದ್ದಾರೆ.
ಲಾಕ್ ಡೌನ್ ಸಡಿಲಗೊಳಿಸಿ ತಿಂಗಳು ಕಳೆದಿದೆ. ವ್ಯಾಪಾರ, ವವಿವಾಟು ನಿಧಾನಕ್ಕೆ ಆರಂಭಗೊಳ್ಳುತ್ತಿದೆ. ಹಿಂದೆ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಕಾಲಿಡಲು ಭಯಪಡುತ್ತಿದ್ದ ಜನರು ಈಗ ಭಯ ಬಿಟ್ಟು ಹೋಗುತ್ತಿದ್ದಾರೆ. ಹೀಗಿರುವಾಗ ಬಾರ್ ಗಳಿಗೆ ಮಾತ್ರ ಇಂಥ ನಿಯಮಗಳೇಕೆ ಎಂದು ತಿಳಿಯದ ಬಾರ್ ಮಾಲಕರು ಕಂಗಾಲಾಗಿದ್ದಾರೆ. ಹೆಚ್ಚಿನ ಬಾರ್ ಮಾಲಕರು ತಮ್ಮ ಸಿಬ್ಬಂದಿಗೆ ಸಂಬಳ ನೀಡಲಾರದೆ, ನೀರು, ವಿದ್ಯುತ್ ಬಿಲ್, ರೆಂಟ್ ಕಟ್ಟಲಾರದೆ ದಿಕ್ಕೆಟ್ಟು ಕೂತಿದ್ದಾರೆ. ಸರಕಾರದ ಈ ನಿಯಮಗಳಿಂದ ಬಾರ್ ಗಳಲ್ಲಿ ದುಡಿಯುತ್ತಿದ್ದ ಅಸಂಖ್ಯ ಸಿಬ್ಬಂದಿ ಮನೆಯಲ್ಲೇ ಉಳಿದಿದ್ದು ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ರೆಸ್ಟೋರೆಂಟ್ ಗಳಿಗೆ ನಿಯಮಗಳನ್ನು ಬದಲಿಸಿದಂತೆ ಬಾರ್ ಗಳಿಗೂ ನಿಯಮಗಳನ್ನು ಸಡಿಲಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ. ಬಾರ್ ಮಾಲಕರ ಜೊತೆ ಬಾರ್ ಕಾರ್ಮಿಕರ ಬದುಕಿನ ಬಗ್ಗೆಯೂ ಸರಕಾರ, ಅಬಕಾರಿ ಇಲಾಖೆ ಗಮನಿಸಿ ಸೂಕ್ತ ನಿಯಮಾವಳಿ ಜಾರಿಗೆ ತಂದಲ್ಲಿ ಬಾರ್ ನಂಬಿ ಬದುಕು ಕಟ್ಟಿಕೊಂಡವರು ನೆಮ್ಮದಿಯಿಂದ ಇರಬಹುದಾಗಿದೆ.

Leave a Reply

Your email address will not be published. Required fields are marked *