`ಬಟ್ಟೆ ಅಂಗಡಿಯನ್ನು ಸೀಲ್ ಡೌನ್ ಮಾಡಿಲ್ಲ, ಸುರಕ್ಷತೆ ದೃಷ್ಟಿಯಿಂದ ಮುಚ್ಚಿದ್ದೇವೆ’

ಮಂಗಳೂರು: ಇಂದು ಮಧ್ಯಾಹ್ನದಿಂದ ನಗರದ ಸೆಂಟ್ರಲ್ ಮಾರ್ಕೆಟ್ ಪರಿಸರದ ಎರಡು ಪ್ರಖ್ಯಾತ ಸ್ವೀಟ್ಸ್ ಸ್ಟಾಲ್ ಮತ್ತು ಬಟ್ಟೆಯಂಗಡಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗುತ್ತಿದ್ದು ಈ ಕುರಿತು ಬಟ್ಟೆಯಂಗಡಿ ಮಾಲಕರು ಸ್ಪಷ್ಟನೆ ನೀಡಿದ್ದಾರೆ.
ಸೆಂಟ್ರಲ್ ಮಾರ್ಕೆಟ್ ಸಮೀಪದ ಲಕ್ಷ್ಮಿ ಕ್ಲೋತ್ ಸ್ಟೋರ್ ನಲ್ಲಿ ಕೊರೊನಾ ಸೋಂಕಿತರಿದ್ದಾರೆ, ನೀವು ಅಲ್ಲಿಗೆ ಭೇಟಿಕೊಡಬೇಡಿ’ ಎಂದೆಲ್ಲ ಮೆಸೇಜ್ ವೈರಲ್ ಆಗಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲಕರು, `ನಮ್ಮ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಯ ತಂದೆಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆಕೆಯ ಅಮ್ಮನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಆಕೆಯನ್ನು ಕೆಲಸಕ್ಕೆ ಸದ್ಯ ಬರಬೇಡಿ ಎಂದಿದ್ದೇವೆ. ಆದರೂ ಗ್ರಾಹಕರು ಮತ್ತು ಸಿಬ್ಬಂದಿಯ ರಕ್ಷಣೆಯ ದೃಷ್ಟಿಯಿಂದ ಬಟ್ಟೆ ಅಂಗಡಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದೇವೆ ಮತ್ತು ಎರಡು ದಿನಗಳ ಕಾಲ ಸ್ವಯಂಪ್ರೇರಿತವಾಗಿ ಮುಚ್ಚಿದ್ದೇವೆ’ ಎಂದಿದ್ದಾರೆ. ಸೆಂಟ್ರಲ್ ಮಾರ್ಕೆಟ್ ಪರಿಸರದ ಎರಡು ಬಟ್ಟೆಯಂಗಡಿ ಮತ್ತು ಸ್ವೀಟ್ಸ್ ಅಂಗಡಿಗಳಿಗೆ ಹೋಗಬೇಡಿ, ಅಲ್ಲಿ ಕೊರೊನಾ ಸೋಂಕಿತರಿದ್ದಾರೆ ಎಂದು ಸಂದೇಶ ಹರಿಯಬಿಡಲಾಗಿತ್ತು.
