ಪಿಲಿಕುಳ: ಕಾಡುಕುರಿಗಳ ಮಾರಣಹೋಮದ ತನಿಖೆ ಯಾಕಿಲ್ಲ? ಪರಿಸರವಾದಿಗಳ ಪ್ರಶ್ನೆಗೆ ಇನ್ನೂ ಸಿಗದ ಉತ್ತರ!

ಮಂಗಳೂರು: ನಗರದ ಹೊರವಲ ಯದ ಪಿಲಿಕುಳ ಜೈವಿಕ ಉದ್ಯಾನವನ ದಲ್ಲಿ ನಡೆದ ಕಾಡುಕುರಿಗಳ ಮೇಲೆ ನಡೆದ ನಾಯಿಗಳ ದಾಳಿ ಭಾರೀ ಕುತೂ ಹಲಕ್ಕೆ ಕಾರಣವಾಗಿದ್ದು, ಪಿಲಿಕುಳ ಆಡಳಿತ ಮಂಡಳಿ ವಾಸ್ತವ ವಿಷಯವನ್ನು ಮುಚ್ಚಿಡುತ್ತಿದೆ ಎಂದು ಪರಿಸರ ವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊನ್ನೆ ಪಿಲಿಕುಳ ಜೈವಿಕ ಉದ್ಯಾನವನದ ಆವರಣಕ್ಕೆ ನುಗ್ಗಿದ ಬೀದಿನಾಯಿಗಳು ಸುಮಾರು 10 ಕಾಡುಕುರಿಗಳನ್ನು ಕೊಂದು ಐದು ಕಾಡುಕುರಿಯನ್ನು ಗಂಭೀರವಾಗಿ ಗಾಯಗೊಳಿಸಿತ್ತು.
ಜೈವಿಕ ಉದ್ಯಾನವನದೊಳಗೆ ಬೀದಿನಾಯಿಗಳು ನುಗ್ಗಿದ ಕುರಿತಾದ ಉದ್ಯಾನವನದ ಅಧಿಕಾರಿಗಳು ಕೊಟ್ಟ ವಿವರಣೆ ನಂಬಲಸಾಧ್ಯ ಎನ್ನುತ್ತಿದ್ದಾರೆ ಪರಿಸರವಾದಿಗಳು. ಉದ್ಯಾನವನದ ಸುತ್ತ ಆವರಣಗೋಡೆ ಇದ್ದರೂ ಮಳೆಗಾಳಿಗೆ ಆವರಣ ಗೋಡೆಗೆ ಬಿದ್ದ ಮರದ ಮೂಲಕ ನಾಯಿಗಳು ಒಳಗೆ ಬಂದಿದೆ ಎನ್ನುತ್ತಿದ್ದಾರೆ ಉದ್ಯಾನವನಕ್ಕೆ ಸಂಬಂಧಪಟ್ಟವರು. ದೊಡ್ಡ ಆವರಣವನ್ನು ಮರಹತ್ತಿ ಬೀದಿನಾಯಿಗಳು ಬರುತ್ತವೆ ಎಂದರೆ ನಂಬಲು ಸಾಧ್ಯವೇ? ಎಂಬ ಪ್ರಶ್ನೆ ಪರಿಸರವಾದಿಗಳದ್ದು.
ಪಿಲಿಕುಳ ನಿಸರ್ಗಧಾಮದ ಜಿಲ್ಲಾಡಳಿತದ ನಿಯಂತ್ರಣಕ್ಕೆ ಬರುವುದರಿಂದ ಅರಣ್ಯ ಇಲಾಖೆಗೂ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬ ಉತ್ತರ ಅರಣ್ಯ ಇಲಾಖೆಯಿಂದ ಕೇಳಿಬಂದಿದೆ. ವನ್ಯಜೀವಿ ಕಾಯಿದೆ ಅನುಸಾರ ಪ್ರಾಣಿಗಳು ಅಸಹಜವಾಗಿ ಮೃತಪಟ್ಟರೆ ಅದರ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸಿ ವರದಿ ನೀಡಬೇಕಾಗುತ್ತದೆ. ಆದರೆ ಪಿಲಿಕುಳ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪಕ್ಕೆ ಪಿಲಿಕುಳದ ಅಧಿಕಾರಿಗಳು ಅವಕಾಶ ನೀಡದಿರುವುದು ಅನುಮಾನದಿಂದ ನೋಡುವಂತಾಗಿದೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಿದ್ದಾರೆ.
ಇಲ್ಲಿ ಇಂಥ ನಿರ್ಲಕ್ಷ್ಯದ ಪ್ರಕರಣಗಳು ನಡೆಯುತ್ತಲೇ ಇದೆ, ಕೆಲವೊಂದು ಬಹಿರಂಗವಾಗುವುದೇ ಇಲ್ಲ ಎಂದು ಪರಿಸರವಾದಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಮೂಕಪ್ರಾಣಿಗಳ ಮೇಲಾದ ದಾಳಿಯ ಹಿನ್ನೆಲೆ ಗೊತ್ತಾಗಬೇಕು. ನಮಗೆ ಪಿಲಿಕುಳದ ಮೇಲೇನು ಅಸಹನೆಯಿಲ್ಲ. ಆದರೆ ಮುಗ್ಧ ಪ್ರಾಣಿಗಳಿಗೆ ಏನೂ ಆಗಬಾರದು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತನಿಖೆ ಮಾಡಲು ಅವಕಾಶ ಕೊಡಬೇಕು ಅಷ್ಟೇ ನಮ್ಮ ಆಗ್ರಹ ಎನ್ನುತ್ತಾರೆ ಪರಿಸರವಾದಿಗಳು.

Leave a Reply

Your email address will not be published. Required fields are marked *