ಪಿಲಿಕುಲದಲ್ಲಿ ನಾಯಿಗಳ ದಾಳಿಗೆ 15ಕ್ಕೂ ಹೆಚ್ಚು ಜಿಂಕೆಗಳ ಮಾರಣಹೋಮ! ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಪ್ರಾಣಿಪ್ರಿಯರ ಆಕ್ರೋಶ!!

ಮಂಗಳೂರು: ಪಿಲಿಕುಲ ನಿಸರ್ಗಧಾಮದಲ್ಲಿ ಬೀದಿನಾಯಿಗಳ ಹಿಂಡು ದಾಳಿ ಮಾಡಿದ ಪರಿಣಾಮ 15ಕ್ಕೂ ಹೆಚ್ಚು ಜಿಂಕೆಗಳ ಮಾರಣಹೋಮ ನಡೆದಿದೆ. ಹತ್ತಾರು ಜಿಂಕೆಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ. ಜಿಲ್ಲಾಡಳಿತ, ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು ಜಿಂಕೆಗಳ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿವೆ. ಇದರಿಂದ ಜಿಂಕೆಗಳು ಸಾವನ್ನಪ್ಪಿದ್ದು ಇನ್ನಷ್ಟು ಜಿಂಕೆಗಳು ಸಾಯುವ ಸ್ಥಿತಿಯಲ್ಲಿವೆ ಎಂದು ಸುದ್ದಿಮೂಲ ಹೇಳಿದೆ. ಅಮಾಯಕ ಪ್ರಾಣಿಗಳಿಗೆ ಸರಕಾರ ನಡೆಸುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮದಲ್ಲೇ ರಕ್ಷಣೆ ಇಲ್ಲವೆಂದರೆ ಇದಕ್ಕೆ ಯಾರು ಹೊಣೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.