ಪಿಪಿಇ ಕಿಟ್ ಧರಿಸದೆ ಕೊರೊನಾ ಸೋಂಕಿತರ ಶವ ಧಫನ ಮಾಡಿದ ಖಾದರ್!

ಮಂಗಳೂರು: ಕೊರೊನಾವೈರಸ್ ಎಷ್ಟು ಮಾರಕ ಎನ್ನುವುದು ನಿಮಗೆಲ್ಲ ತಿಳಿದಿರಬಹುದು. ಮಂಗಳೂರಿನಲ್ಲಂತೂ ಕೊರೊನಾ ಸೋಂಕಿತರ ಶವಸಂಸ್ಕಾರಕ್ಕೂ ಅಡ್ಡಿಯಾಗಿದ್ದು ನಿಮಗೆಲ್ಲ ತಿಳಿದೇ ಇದೆ. ಬೋಳೂರಿನ ಸ್ಮಶಾನದಲ್ಲಿ, ವಾಮಂಜೂರಿನ ಸ್ಮಶಾನದಲ್ಲಿ ಈ ಕುರಿತು ಹೈಡ್ರಾಮವೇ ನಡೆದಿದ್ದು ಜನರಿಗೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಸಾಥ್ ನೀಡಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಇದಕ್ಕೆಲ್ಲ ಸೆಡ್ಡು ಹೊಡೆದಿರುವ ಮಂಗಳೂರು ಶಾಸಕ ಯು.ಟಿ. ಖಾದರ್ ಸಾಹೇಬ್ರು ಮಾತ್ರ ಕೇವಲ ಮಾಸ್ಕ್ ಧರಿಸಿ, ಪಿಪಿಇ ಕಿಟ್, ಸಾಮಾಜಿಕ ಅಂತರ, ಕೈಗೆ ಗ್ಲೌಸ್, ಸ್ಯಾನಿಟೈಜರ್ ಇದ್ಯಾವುದರ ಗೊಡವೆಯೂ ಇಲ್ಲದೆ ತಮ್ಮ ಸಮುದಾಯದ ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭ ದಫನ ಕಾರ್ಯ ನಡೆಸಿ ಸುದ್ದಿಯಲ್ಲಿದ್ದಾರೆ.
ಇದನ್ನು ಕಾಂಗ್ರೆಸಿಗರು ತಮ್ಮ ಪ್ರಚಾರಕ್ಕೆ ಬಳಸಿಕೊಂಡು ಬಿಜೆಪಿ ಶಾಸಕರಿಗೆ ಸೆಡ್ಡು ಹೊಡೆದ ಏಕೈಕ ಶಾಸಕ ಖಾದರ್'ಖಾದರ್ ನಡೆ ಅಭಿವೃದ್ಧಿ ಕಡೆ’ ಎಂದೆಲ್ಲ ಪ್ರಚಾರ ಮಾಡುತ್ತಿದ್ದರೆ ಜನಸಾಮಾನ್ಯರು ಮಾತ್ರ `ಖಾದರ್ ನಡೆ ಎಷ್ಟು ಸರಿ?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರ ಶವಸಂಸ್ಕಾರ, ಶವದಫನಕ್ಕೆ ಸಾಮಾನ್ಯವಾಗಿ ವಿರೋಧ ವ್ಯಕ್ತವಾಗುತ್ತದೆ. ನಿನ್ನೆಯೂ ಬೋಳಾರದ ವೃದ್ಧ ಸೋಂಕಿಗೆ ಬಲಿಯಾದಾಗ ಬೋಳಾರದ ಮಸೀದಿಯ ಖಬರ್ ಸ್ಥಾನದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಕಾರ್ಯಕರ್ತರು ಶವದಫನ ಮಾಡುವಲ್ಲಿ ಸಹಕರಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದಿದ್ದ ಖಾದರ್ ಅವರು ಬರೀ ಮಾಸ್ಕ್ ಮಾತ್ರ ಧರಿಸಿ ಕೈಯಲ್ಲಿ ಹಾರೆ ಹಿಡಿದು ಶವದಫನ ಮಾಡಲು ನೆರವಾಗಿದ್ದಾರೆ. ಶಾಸಕರು ಹಾರೆಯಿಂದ ಮಣ್ಣು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಸಕರು ಸಾಮಾಜಿಕ ಅಂತರವಿಲ್ಲದೆ ನಿಂತಿದ್ದಲ್ಲದೆ ಕನಿಷ್ಟ ರಕ್ಷಾ ವ್ಯವಸ್ಥೆಯೂ ಇಲ್ಲದೆ ಸೋಂಕಿತರ ದಫನ ಕಾರ್ಯ ನಡೆಸಿದ್ದು ಸರಿಯೇ ಎಂದು ಜನರು ಕೇಳುತ್ತಿದ್ದಾರೆ. ಶಾಸಕರು ಸದಾ ಜನರ ಮಧ್ಯೆ ಇರುವವರು, ಕೊರೊನಾ ಮಧ್ಯೆಯೂ ನಾನಾ ಕಾರ್ಯಕ್ರಮಗಳಲ್ಲಿ ಓಡಾಡುವರರು ಹೀಗಾಗಿ ಇವರೇ ಪಿಪಿಇ ಕಿಟ್ ಧರಿಸದೆ ದಫನಕಾರ್ಯದಲ್ಲಿ ಭಾಗವಹಿಸಿ ಜನರ ಮಧ್ಯೆ ಹೋದರೆ ಹೇಗೆ ಎಂಬ ಪ್ರಶ್ನೆಗೆ ಖುದ್ದು ಅವರೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *