ಪಿಎಂ ಪರಿಹಾರ ನಿಧಿಯ ದೇಣಿಗೆ ವಿವರ ಕೋರಿ ಹೈಕೋರ್ಟ್ ಗೆ ಹಿತಾಸಕ್ತಿ ಅರ್ಜಿ!!

ನವದೆಹಲಿ: ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹರಿದು ಬಂದಿರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಿಎಂ ಕೇರ್ಸ್ ಮಾಹಿತಿ ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಡಾ.ಎಸ್.ಎಸ್ ಹೂಡಾ ಅವರು ವಕೀಲ ಆದಿತ್ಯ ಹೂಡಾ ಮೂಲಕ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ, ಸರ್ಕಾರಿ ನಿಯಂತ್ರಿತ ಎಲ್ಲ ಹಣಕಾಸು ಸಂಸ್ಥೆಗಳು ಮಾಹಿತಿ ಹಕ್ಕಿನಡಿ ಬರಲಿದೆ. ಪಿಎಂ ಕೇರ್ಸ್ ಫಂಡ್ ಕೂಡಾ ಸರ್ಕಾರದ ಹಣಕಾಸು ಸಂಸ್ಥೆಯಾಗಿದ್ದು ಉದ್ಯಮ ಕ್ಷೇತ್ರಗಳಿಂದ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಸಾರ್ವಜನಿಕರು ಕೂಡ ಹಣ ನೀಡಿದ್ದಾರೆ. ಹೀಗಾಗಿ ಲೆಕ್ಕ ಒದಗಿಸುವಂತೆ ಅರ್ಜಿಯಲ್ಲಿ ಕೇಳಲಾಗಿದೆ.
ಒಂದೊಮ್ಮೆ ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದಾದರೆ ಇದಕ್ಕೆ ಹಣ ನೀಡುವಂತೆ ಸರ್ಕಾರ ಜನರನ್ನು ಪ್ರೇರೆಪಿಸುವಂತಿಲ್ಲ. ಜನರ ಹಣ ವ್ಯಯದ ಬಗ್ಗೆ ಮಾಹಿತಿ ಪಡೆಯುವುದು ಜನರ ಮೂಲಭೂತ ಹಕ್ಕು ಎಂದು ಹೇಳಲಾಗಿದೆ.