ಪಾಕಿಸ್ತಾನದಲ್ಲಿ ಯುಪಿ ಯೋಗಿಯ ಗುಣಗಾನ!

ನವದೆಹಲಿ: ಅಧಿಕಾರಕ್ಕೆ ಬಂದಂದಿನಿಂದ ಸಮಾಜದ್ರೋಹಿ, ರೌಡಿಗಳ ನಿಗ್ರಹ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ, ಯೋಗಿ ಆದಿತ್ಯನಾಥ್ ಇದೀಗ ನೆರೆಯ ಪಾಕಿಸ್ತಾನದಲ್ಲೂ ಚರ್ಚೆಯ ವ್ಯಕ್ತಿಯಾಗಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಹೆಚ್ಚು ಗಮನ ಸೆಳೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಕೂಡ ಒಂದು. ಹೀಗಾಗಿ ಯೋಗಿ ಆದಿತ್ಯನಾಥ ಕಾರ್ಯಕ್ಕೆ ನೆರೆಯ ಪಾಕ್‍ನಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಉತ್ತರಪ್ರದೇಶದಲ್ಲಿ ಕೋವಿಡ್ 19 ನಿಯಂತ್ರಣವಾಗಿರುವುದನ್ನು ಪಾಕಿಸ್ತಾನದ ಡಾನ್ ಪತ್ರಿಕೆಯ ಸಂಪಾದಕ ಫಾಹದ್ ಹುಸೇನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಉತ್ತರ ಪ್ರದೇಶಕ್ಕೆ ಹೋಲಿಕೆ ಮಾಡಿ ಫಾಹದ್ ಹುಸೇನ್ ಟ್ವೀಟ್ ಮಾಡಿ ಕೊರೊನಾ ಗ್ರಾಫ್ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಮತ್ತು ಪಾಕಿಸ್ತಾನ ಜನಸಂಖ್ಯೆ ಮತ್ತು ಸಾಕ್ಷರತೆ ಪ್ರಮಾಣ ಎರಡು ಸರಿಸುಮಾರು ಒಂದೇ ರೀತಿಯಾಗಿದೆ. ಪಾಕಿಸ್ತಾನದಲ್ಲಿ ಜನ ಸಾಂದ್ರತೆ ಕಡಿಮೆ ಇದ್ದು ಜಿಡಿಪಿ ಜಾಸ್ತಿಯಿದೆ. ಉತ್ತರ ಪ್ರದೇಶದಲ್ಲಿ ಲಾಕ್‍ಡೌನ್ ಬಹಳ ಕಠಿಣವಾಗಿದ್ದ ಕಾರಣ ಕೋವಿಡ್ 19ಗೆ ಮೃತ ಪಡುವ ಸೋಂಕಿತರ ಸಂಖ್ಯೆ ಕಡಿಮೆಯಿದೆ ಎಂದು ಬರೆದುಕೊಂಡಿದ್ದಾರೆ. ನಮ್ಮಲ್ಲಿ ಕಠಿಣ ಲಾಕ್‍ಡೌನ್ ಮಾಡದ ಕಾರಣ ಸಾವು ಹೆಚ್ಚಾಗಿದೆ. ಉತ್ತರ ಪ್ರದೇಶ ಶ್ರೀಮಂತ ರಾಜ್ಯವಲ್ಲ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಯಾಕೆ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ 21.22 ಕೋಟಿ ಜನಸಂಖ್ಯೆಯಿದ್ದರೆ, ಉತ್ತರ ಪ್ರದೇಶದಲ್ಲಿ 2012ರ ಜನಗಣತಿ ಪ್ರಕಾರ 20.42 ಕೋಟಿ ಜನಸಂಖ್ಯೆಯಿದೆ. ಪಾಕಿಸ್ತಾನದಲ್ಲಿ ಒಟ್ಟು 1,05,118 ಮಂದಿಗೆ ಸೋಂಕು ಬಂದಿದ್ದು, 2096 ಮಂದಿ ಮೃತಪಟ್ಟಿದ್ದಾರೆ. 34,355 ಮಂದಿ ಗುಣಮುಖರಾಗಿದ್ದು, 70,763 ಸಕ್ರಿಯ ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ 10,536 ಮಂದಿಗೆ ಸೋಂಕು ಬಂದಿದ್ದು, 275 ಮಂದಿ ಮೃತಪಟ್ಟಿದ್ದಾರೆ. 6,185 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 4,076 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

Leave a Reply

Your email address will not be published. Required fields are marked *