ನೂತನ ಮನೆ ಕಟ್ಟಿಸಿದ್ದ ಯೋಧ ಗೃಹಪ್ರವೇಶದ 15 ದಿನಗಳಲ್ಲೇ ಹುತಾತ್ಮ!

ನವದೆಹಲಿ: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಭಾರತದ ಯೋಧರಲ್ಲಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕ್ಕಲೂರು ಗ್ರಾಮದ ಕೆ ಪಳನಿ ಕೂಡಾ ಸೇರಿದ್ದಾರೆ. ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆ ಪಳನಿ ಅವರು ರಾಮನಾಥಪುರಂ ಪಟ್ಟಣದಲ್ಲಿ ಹೊಸ ಕನಸಿನ ಮನೆ ನಿರ್ಮಾಣ ಮಾಡಿದ್ದರು. ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪಟ್ಟಣಕ್ಕೆ ಸಮೀಪಲ್ಲಿ ಮನೆ ನಿರ್ಮಿಸಿದ್ದರು. ಪಳನಿ ಅವರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ 15 ದಿನಗಳ ಹಿಂದಷ್ಟೇ ನೆರವೇರಿತ್ತು ಎನ್ನಲಾಗಿದೆ.
ಗೃಹಪ್ರವೇಶದ ಸಂದರ್ಭ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಸಿದ್ದ ಹಿನ್ನೆಲೆಯಲ್ಲಿ ಪಳನಿ ಕರ್ತವ್ಯಕ್ಕೆ ರಜೆ ತೆಗೆದುಕೊಂಡಿರಲಿಲ್ಲ. ಪತ್ನಿ ವನತಿದೇವಿ, ಮಗ ಪ್ರಸನ್ನ(10), ಮಗಳು ದಿವ್ಯಾ(8) ಹಾಗೂ ಸಂಬಂಧಿಕರು ಗೃಹಪ್ರವೇಶ ನೆರವೇರಿಸಿದ್ದರು. ಪಳನಿ ನಿವೃತ್ತಿಗೆ ಒಂದು ವರ್ಷ ಮಾತ್ರವೇ ಉಳಿದಿತ್ತು. ಆದರೆ ಅಷ್ಟರಲ್ಲೇ ಚೀನಾ ಸೈನಿಕರ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ. ಪಳನಿ ನಿವೃತ್ತಿ ಬಳಿಕ ಹೊಸ ಮನೆಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯುವ ಆಸೆ ಹೊಂದಿದ್ದರು. ಆದರೆ ಪಳನಿ ಹೊಸಮನೆಗೆ ಕಾಲಿಡುವ ಆಸೆ ಕೊನೆಗೂ ಆಸೆಯಾಗಿಯೇ ಉಳಿದಿದೆ. ಪಳನಿಯ ಕಿರಿಯ ಸಹೋದರ ಇಧಾಯಕಾನಿ ಸಹ ಸೇನೆಗೆ ಸೇರಿದ್ದರು. ಅವರು ಸದ್ಯ ರಾಜಸ್ಥಾನದಲ್ಲಿ ನೆಲೆಸಿದ್ದು ಅಣ್ಣನ ಅಂತ್ಯಕ್ರಿಯೆಗೆ ಹಾಜರಾಗುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಕೆ ಪಲ್ನೈಸ್ವಾಮಿ ಪಳನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಅರ್ಹ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನೂ ಘೋಷಿಸಿದ್ದಾರೆ. ಅಂತಿಮ ವಿಧಿಗಳನ್ನು ರಾಜ್ಯ ಸರ್ಕಾರದ ಗೌರವಗಳೊಂದಿಗೆ ನಡೆಸಲಾಗುವುದು ಎಂದಿದ್ದಾರೆ.

Leave a Reply

Your email address will not be published. Required fields are marked *