`ನಮ್ಮ ಭೂಮಿ’ ಸಾಫ್ಟ್ ವೇರ್ ನಲ್ಲಿ ದೋಷ: ಗುಬ್ಬಿ ತಹಶೀಲ್ದಾರ್ ಮನವಿ

ಗುಬ್ಬಿ: ಗುಬ್ಬಿ ತಾಲೂಕಿಗೆ ಹೊಸದಾಗಿ ನವೀಕರಿಸಿದ `ನಮ್ಮ ಭೂಮಿ’ ಸಾಫ್ಟ್‍ವೇರ್ ಅಳವಡಿಸಿದ್ದು ಕೆಲ ತಾಂತ್ರಿಕ ದೋಷ ಎದುರಾಗುತ್ತಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಮನವಿ ಮಾಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನ ಎಲ್ಲಾ ನಾಡಕಚೇರಿಯಲ್ಲಿ ಪಹಣಿ ವಿತರಣೆ ಸ್ಥಗಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪಹಣಿಗಾಗಿ ತಾಲೂಕು ಕಚೇರಿಯಲ್ಲಿ ಸರದಿ ಸಾಲು ಹೆಚ್ಚಾಗುತ್ತಿದೆ. ನಮ್ಮ ತಾಲೂಕಿಗೆ ಮೊದಲು ಹೊಸ ಸಾಫ್ಟ್‍ವೇರ್ ಅಳವಡಿಸಿರುವ ಕಾರಣ ಎಲ್ಲವೂ ಸರಿಪಡಿಸಿಕೊಳ್ಳಲು ಸಮಯ ಅಗತ್ಯವಿದೆ. ಈ ಮಧ್ಯೆ ತಾಂತ್ರಿಕ ಸಮಸ್ಯೆ ಜತೆಗೆ ಕೊರೋನಾ ಜಾಗೃತಿ, ಸಾಮಾಜಿಕ ಅಂತರ ಈ ಬಗ್ಗೆ ಮನಗಂಡು ರೈತರು ಸಹಕರಿಸಬೇಕಿದೆ ಎಂದು ಕೋರಿಕೊಂಡರು.
ಪಿಂಚಣಿ ಸಮಸ್ಯೆಗೆ ಬಹುತೇಕ ಪರಿಹಾರ ಹುಡಕಲಾಗಿದೆ. 1200 ಅರ್ಜಿಗಳ ವಿಲೇವಾರಿ ಮಾಡಿದಲ್ಲಿ ಸಂರ್ಪೂಗೊಳ್ಳಲಿದೆ. ಈ ಜತೆಗೆ ವಿಕಲ ಚೇತನರ ಪಿಂಚಣಿದಾರರ ಸಮಸ್ಯೆಗೂ ಭಾಗಶಃ ಪರಿಹಾರ ಕಂಡು ಹಿಡಿಯಲಾಗಿದೆ. ಎಲ್ಲಾ ನಾಡಕಚೇರಿಯಲ್ಲೂ ಹೊಸದಾಗಿ ಪಿಂಚಣಿ ಅರ್ಜಿದಾರರು ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾರ್ಯವನ್ನು ನಿರಂತರ ನಡೆಸಲು ಸೂಚಿಸಲಾಗಿದೆ ಎಂದ ಅವರು ಪಟ್ಟಣದಲ್ಲಿ ಸಮಸ್ಯೆಗಳ ದೂರು ಬಂದಿದ್ದು, ಸೇತುವೆ ದುರಸ್ಥಿ, ವಿದ್ಯುತ್ ಸಮಸ್ಯೆ ಹಾಗೂ ಜಲ ಶುದ್ದೀಕರಣ ಘಟಕ ಕಾರ್ಯವನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದರು. ಹೊರರಾಜ್ಯದಿಂದ ಬಂದವರಿಗೆ ಕ್ವಾರೆಂಟೈನ್ ನಡೆಸಲು ಶಾಲಾ ಕಾಲೇಜು, ವಸತಿ ಶಾಲೆಗಳನ್ನು ಈ ಮೊದಲು ಬಳಸಲಾಗಿತ್ತು. ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನಲೆಯಲ್ಲಿ ಶಾಲೆಗಳನ್ನು ಹೊರತುಪಡಿಸಿ ಸಮುದಾಯಭವನ, ಕಲ್ಯಾಣ ಮಂಟಪಗಳ ಬಳಕೆ ಕ್ರಮವಹಿಸಲಾಗಿದೆ. ಈ ಬಗ್ಗೆ ಸಲ್ಲದ ಅಪಪ್ರಚಾರ ಮಾಡುವ ಅಗತ್ಯವಿಲ್ಲ. ಮಕ್ಕಳ ಪರೀಕ್ಷೆ ಹಿನ್ನಲೆ ಈ ಕ್ರಮವಹಿಸಲಾಗಿದ್ದು, ಚೇಳೂರಿನಲ್ಲಿ 6 ಮಂದಿ ಹಾಗೂ ಪಟ್ಟಣದಲ್ಲಿ 4 ಮಂದಿ ಹೊರರಾಜ್ಯದವರನ್ನು ಕ್ವಾರೆಂಟೈನ್ ಇರಿಸಲಾಗಿದೆ. ರೆಡ್ ಝೋನ್‍ಗಳಾದ ಆರು ರಾಜ್ಯಗಳಿಂದ ಬಂದವರಿಗೆ ಕಡ್ಡಾಯ ಹೋಂ ಕ್ವಾರೆಂಟೈನ್ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *