ದ.ಕ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬೀದಿಪಾಲಾದ ರೋಗಿಗಳು! ದೇರಳಕಟ್ಟೆಯ “ಕಣಚೂರು” ಆಸ್ಪತ್ರೆ ವಿರುದ್ಧ ಆರೋಪ!!

ಮಂಗಳೂರು: ಜಿಲ್ಲಾಸ್ಪತ್ರೆ ವೆನ್ಲಾಕ್ ಅನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಇದರಿಂದ ಸರಕಾರಿ ಆಸ್ಪತ್ರೆಯನ್ನೇ ನಂಬಿದ್ದ ಬಡರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳ ಹಾರಾಟಕ್ಕೆ ಮೂಗುದಾರ ಹಾಕುವವರೇ ಇಲ್ಲವಾಗಿದ್ದು ಮೂವರು ಬಡಪಾಯಿ ರೋಗಿಗಳಿಗೆ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಯೊಂದು ಅವರನ್ನು ರಸ್ತೆಯಲ್ಲಿ ತಂದು ಬಿಟ್ಟು ಹೋದ ಘಟನೆ ನಗರದಲ್ಲಿ ನಡೆದಿದೆ.
ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಆಸ್ಪತ್ರೆ ಅಮಾನವೀಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳನ್ನ ಹಣವಿಲ್ಲದ ಕಾರಣಕ್ಕೆ ಕಂಕನಾಡಿ ಮಾರ್ಕೆಟ್ ಬಳಿ ಬಿಟ್ಟ ಆಸ್ಪತ್ರೆ ಸಿಬ್ಬಂದಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ಸಂಜೆ ಅಂಬ್ಯುಲೆನ್ಸ್ ನಲ್ಲಿ ತಂದು ಬಿಟ್ಟು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಬೀದಿಪಾಲಾದ ರೋಗಿಗಳು. ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದ ಇವರು ವೆನ್ ಲಾಕ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ಹಿನ್ನೆಲೆಯಲ್ಲಿ ಅಲ್ಲಿನ ರೋಗಿಗಳನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿತ್ತು. ಇವರನ್ನು ಮೂರು ತಿಂಗಳ ಹಿಂದೆ ದೇರಳಕಟ್ಟೆಯ ಕನಚೂರು ಆಸ್ಪತ್ರೆಗೆ ಜಿಲ್ಲಾಡಳಿತ ಶಿಫ್ಟ್ ಮಾಡಿತ್ತು. ಮೂರು ತಿಂಗಳಿಗೂ ಅಧಿಕ ಸಮಯ ಕನಚೂರು ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆಯಿರೋ ರೋಗಿಗಳು ಇವರಾಗಿದ್ದಾರೆ.
ಉಚಿತ ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಬೀದಿಗೆ ಬಿಟ್ಟ ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮಳೆ, ಚಳಿಯ ಮಧ್ಯೆ ಬಡರೋಗಿಗಳು ಮಾರುಕಟ್ಟೆ ಜಗಲಿಯಲ್ಲಿ ಕೂತಿದ್ದು ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಊಟ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲಾಡಳಿತ ಇನ್ನಾದರೂ ಎಚ್ಛೆತ್ತುಕೊಳ್ಳುತ್ತಾ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *