ದ.ಕ.-ಉಡುಪಿಗೆ `ಮಹಾ’ಕಂಟಕ! ಮುಂಬೈಯಿಂದ ಬರಲಿದ್ದಾರೆ 10 ಸಾವಿರಕ್ಕೂ ಅಧಿಕ ಮಂದಿ!!
ಮಂಗಳೂರು: ಈ ವಾರದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷೀಣಿಸಿದ್ದು ಜನರು ಸದ್ಯ ನಿರಾಳರಾಗಿದ್ದಾರೆ. ಕಳೆದ ವಾರ ಮುಂಬೈಯಿಂದ ಆಗಮಿಸಿದ್ದವರಲ್ಲಿ ಸೋಂಕು ಕಂಡುಬಂದಿದ್ದ ಕಾರಣ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ದಾಖಲಿಸಿಕೊಂಡಿತ್ತು. ಆದರೆ ಈಗ ಕಳೆದೆರಡು ದಿನಗಳಿಂದ ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿದಿದೆ. ಆದರೆ ಈ ಖುಷಿ ಹೆಚ್ಚು ದಿನ ಇರುವ ಲಕ್ಷಣ ಗೋಚರಿಸುತ್ತಿಲ್ಲ. ಯಾಕೆಂದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಾಪಸ್ ಆಗಲು ಈಗಾಗಲೇ 10 ಸಾವಿರಕ್ಕೂ ಅಧಿಕ ಮುಂಬಯಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ 8 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು ಸರಕಾರ ಇನ್ನು ಮುಂದೆ ಮನೆಯಲ್ಲೇ ಕ್ವಾರಂಟೈನ್ ಇರಬಹುದು ಎಂದಿದ್ದೇ ತಡ, ಮುಂಬೈಯಲ್ಲಿ ನೆಲೆಸಿರುವ ತುಳುವರು ಖುಷಿಯಿಂದ ಊರಿಗೆ ಹೊರಟಿದ್ದಾರಂತೆ. ಇದರಿಂದ ಮುಂದಿನ ದಿನಗಳಲ್ಲಿ ಅವಳಿ ಜಿಲ್ಲೆಗಳು ಕೊರೊನಾ ಮಹಾಮಾರಿಯಿಂದ ಮತ್ತಷ್ಟು ನಲುಗೋದು ನಿಶ್ಚಿತ ಅನ್ನಬಹುದು.
ಮೊದಲ ಹಂತದಲ್ಲಿ ಜಿಲ್ಲೆಗೆ ಬಂದಿದ್ದ 8000 ಮಂದಿಯಲ್ಲಿ 900ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬರೋಬ್ಬರಿ 619 ಮಂದಿ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಎರಡನೇ ಹಂತದಲ್ಲಿ ಮತ್ತೆ 8000ಕ್ಕೂ ಅಧಿಕ ಮಂದಿ ಜಿಲ್ಲೆಗೆ ಆಗಮಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯ ಸರಕಾರ ಕ್ವಾರಂಟೈನ್ ನಿಯಮಾವಳಿ ಬದಲಿಸಿದ್ದೇ ತಡ ಹತ್ತು ಸಾವಿರಕ್ಕೂ ಅಧಿಕ ಮಂದಿ ಊರಿಗೆ ಮರಳಲು ಮುಂದಾಗಿದ್ದಾರೆ. ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಸುಧಾಕರ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನೂ ನೀಡಿದ್ದು ಸರಕಾರದ ನಿರ್ಧಾರದಿಂದ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.
ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವ ಮಾಧ್ಯಮಗಳು