ದ್ವಿಚಕ್ರವಾಹನದಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆ: ಅರೋಪಿ ಪರಾರಿ
ಉಪ್ಪಿನಂಗಡಿ: ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಆದರೆ ಆರೋಪಿ ಪರಾರಿಯಾಗಿದ್ದಾನೆ.
ಜು.22ರ ಸಂಜೆ ಸುಮಾರು ಐದು ಗಂಟೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿ ಜೊತೆ ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಡಬ ತಾಲೂಕು ಕೊಣಾಜೆ ಗ್ರಾಮದ ಉದನೆ ತೂಗು ಸೇತುವೆ ಸೇತುವೆ ಬಳಿ KA 21 X 1845 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಆರೋಪಿ ರೇಖ್ಯಾ ನಿವಾಸಿ ತಿಮ್ಮಪ್ಪ ಎಂಬಾತ ಮದ್ಯ ಸಾಗಾಟ ನಡೆಸುತ್ತಿದ್ದ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ದ್ವಿಚಕ್ರವಾಹನದಲ್ಲಿ ಅಂದಾಜು 3,500 ರೂ. ಮೌಲ್ಯದ ಮದ್ಯ ಪತ್ತೆಯಾಗಿದೆ.
ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 32 ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಾಗಿ ಬಲೆ ಬೀಸಲಾಗಿದೆ.