ದ್ರಾವಿಡ್ ಮುಕುಟಕ್ಕೆ ಮತ್ತೊಂದು ಗರಿ

ಮುಂಬೈ: ಕಳೆದ 50 ವರ್ಷದಲ್ಲಿ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆ ನೀಡಿ ವಿಸ್ಡನ್ ಇಂಡಿಯಾ ನಡೆಸಿದ ಪೋಲ್ನಲ್ಲಿ ರಾಹುಲ್ ದ್ರಾವಿಡ್ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ದಿ ವಾಲ್ ಖ್ಯಾತಿಯ ದ್ರಾವಿಡ್ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.
ವಿಸ್ಡನ್ ಇಂಡಿಯಾ ಪೋಲ್ನಲ್ಲಿ 11,400 ಮಂದಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಶೇ.52 ಮಂದಿ ಮತ ಹಾಕಿರುವುದಾಗಿ ವಿಸ್ಡನ್ ಇಂಡಿಯಾ ಪ್ರಕಟಿಸಿದೆ. ಪೋಲ್ನಲ್ಲಿ ಅಂತಿಮ ಹಂತದವರೆಗೂ ಸಚಿನ್ ಪೈಪೋಟಿ ನೀಡಿದ್ದರೂ ಕೊನೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕೊಹ್ಲಿ, ಗವಾಸ್ಕರ್ ಅವರು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಭಾರತ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನಾಡಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಿಂದ 51.12 ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಡಿರುವ 86 ಟೆಸ್ಟ್ ಪಂದ್ಯಗಳಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ. ಉಳಿದಂತೆ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಗಡಿದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.