ದೇಶದಲ್ಲಿ 4,56,183 ಸೋಂಕಿತರು, 14,476 ಮಂದಿ ಬಲಿ! `ಮಹಾಮಾರಿ’ಯ ಬಗ್ಗೆ ಎಚ್ಚರವಿರಲಿ!!
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 15,968 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ, ಮಹಾಮಾರಿಗೆ 465 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ದೇಶದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 14,476ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4,56,183ಕ್ಕೆ ಏರಿಕೆಯಾಗಿದೆ. ಈ ಪೈಕಿ 2,58,685 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದ 1,83,022 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ವೈದ್ಯಕೀಯ ತಪಾಸಣೆ ವೇಗವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿನಿತ್ಯ 2 ಲಕ್ಷಕ್ಕಿಂತ ಅಧಿಕ ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದರು. ಅದರಂತೆ ಕಳೆದ 24 ಗಂಟೆಗಳಲ್ಲಿ ಐಸಿಎಂಆರ್ ನಲ್ಲಿ 2,15,195 ಮಂದಿ ಮಾದರಿಯನ್ನು ತಪಾಸಣೆ ನಡೆಸಲಾಯಿತು. ಜೂನ್ 23ರವರೆಗೂ ದೇಶದಲ್ಲಿ ಬರೋಬ್ಬರಿ 73,52,911 ಜನರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.